Home ಕರಾವಳಿ ಮದುವೆ ಸರ್ಟಿಫಿಕೇಟ್ ನೀಡಲು ಜಿಲ್ಲಾ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ ಅನುಮತಿ: ಅಬ್ದುಲ್ ನಾಸಿರ್ ಲಕ್ಕಿಸ್ಟಾರ್

ಮದುವೆ ಸರ್ಟಿಫಿಕೇಟ್ ನೀಡಲು ಜಿಲ್ಲಾ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ ಅನುಮತಿ: ಅಬ್ದುಲ್ ನಾಸಿರ್ ಲಕ್ಕಿಸ್ಟಾರ್

ಮಂಗಳೂರು: ಮುಸ್ಲಿಮರ ಮದುವೆ ಸರ್ಟಿಫಿಕೇಟ್ ನೋಂದಣಿ ಮಾಡಲು ರಾಜ್ಯ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ದ.ಕ.ಜಿಲ್ಲೆಯ ಮುಸ್ಲಿಮರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಸರ್ಟಿಫಿಕೇಟ್ ನೋಂದಣಿ ಮಾಡಲು ರಾಜ್ಯ ಸರ್ಕಾರ 2023, ಫೆಬ್ರವರಿ 21ರಂದು ವಕ್ಫ್ ಮಂಡಳಿಗೆ ಅನುಮತಿ ನೀಡಿದೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಸಾರ್ವಜನಿಕರು ಮದುವೆ ನೋಂದಣಿ ಮಾಡಿಕೊಳ್ಳಲು ಇಚ್ಛಿಸಿದರೆ ಅದರ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಅಧಿಕಾರಿಗೆ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಅವರು 15 ದಿನಗಳೊಳಗೆ ಮದುವೆ ಪ್ರಮಾಣ ಪತ್ರವನ್ನು ನೀಡಲಿದ್ದಾರೆ ಎಂದು ತಿಳಿಸಿದರು.


ಮದುವೆ ಪ್ರಮಾಣ ಪತ್ರವನ್ನು ಪಡೆಯುವವರು, ವಧು ಅಥವಾ ವರ ಅರ್ಜಿ ಸಲ್ಲಿಸಬೇಕು, ಜಂಟಿ ವಿವಾಹ ದೃಢೀಕರಣ ಪತ್ರ ಸಲ್ಲಿಸಬೇಕು. ಒಂಟಿ ವಿವಾಹ ದೃಢೀಕರಣ ಪತ್ರ ಅಂಗೀಕರಿಸುವುದಿಲ್ಲ. ನೋಟರಿಯಿಂದ ದೃಢೀಕರಣ ಮಾಡಿಸಬೇಕು. ಮಸೀದಿಯಿಂದ ನೀಡುವ ನಿಖಾನಾಮ (ದಫ್ತರ್) ಮೂಲ ಪ್ರತಿ ಜೆರಾಕ್ಸ್ ಪ್ರತಿ ಪಡೆದು ಅದನ್ನು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಮಾತ್ರ ದೃಢೀಕರಣ ಮಾಡಿಕೊಡಬೇಕು. ನಿಖಾನಾಮದಲ್ಲಿರುವಂತೆ ವಿವಾಹ ದೃಢೀಕರಣ ಪತ್ರದಲ್ಲಿ ವರ ಮತ್ತು ವಧುವಿನ ಹೆಸರು ದಾಖಲಿಸಲಾಗುವುದು. ಆದ್ದರಿಂದ ಆಧಾರ್ ಮತ್ತು ಪಾರ್ಸ್ ಪೋರ್ಟ್ ನಲ್ಲಿ ಇರುವಂತೆ ಹೆಸರುಗಳನ್ನು ದಾಖಲಿಸಬೇಕು. ಯಾವುದೇ ಕಾರಣಕ್ಕೂ ಹೆಸರುಗಳನ್ನು ಬದಲಾಯಿಸಲಾಗುವುದಿಲ್ಲ. ಹೆಸರುಗಳನ್ನು ತಿದ್ದುಪಡಿ ಮಾಡಿದ್ದಲ್ಲಿ ಅಂತಹ ಅರ್ಜಿದಾರರು ಮಸೀದಿಯ ಮೂಲ ನಿಖಾನಾಮ ರಿಜಿಸ್ಟರ್ ವಕ್ಫ್ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು, ಕೇವಲ ಝೆರಾಕ್ಸ್ ಪ್ರತಿಯಲ್ಲಿ ತಿದ್ದುಪಡಿ ಮಾಡಿ ದೃಢೀಕರಣ ಮಾಡಿಸಿಕೊಂಡು ಬಂದಲ್ಲಿ ಅಂತಹ ನಿಖಾನಾಮ ಅಂಗೀಕರಿಸಲಾಗುವುದಿಲ್ಲ ಎಂದು ನಾಸಿರ್ ತಿಳಿಸಿದರು.


ಮಸೀದಿಯ ಅಧ್ಯಕ್ಷರು/ಕಾರ್ಯದರ್ಶಿಗಳು ಸಹ ನಿಖಾ ಸಂದರ್ಭದಲ್ಲಿ ಆಧಾರ್ ಮತ್ತು ಪಾಸ್ ಪೋರ್ಟ್ ನಲ್ಲಿ ಇರುವಂತೆ ಹೆಸರುಗಳನ್ನು ದಾಖಲಿಸಬೇಕು. ಕೆಲವು ಮಸೀದಿಗಳಲ್ಲಿ ನಿಖಾನಾಮ ಹೊರತುಪಡಿಸಿ ಬೇರೆ ನಿಖಾ ಸರ್ಟಿಫಿಕೇಟ್ ಎಂದು ನೀಡುತ್ತಿರುವುದು ಗಮನಕ್ಕೆ ಬಂದಿದೆ. ನಿಖಾನಾಮ ಹೊರತುಪಡಿಸಿ ಬೇರೆ ನಿಖಾ ಸರ್ಟಿಫಿಕೇಟ್ ನೀಡಿದ್ದಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಅಬ್ದುಲ್ ನಾಸಿರ್ ಹೇಳಿದರು.

Join Whatsapp
Exit mobile version