ಬೆಂಗಳೂರು: ಸಂಘಪರಿವಾರ ಮತ್ತು ಹಿಂದುತ್ವದ ವಿರುದ್ಧ ಟ್ವೀಟ್ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅವರಿಗೆ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ನೀಡಲು ಚೇತನ್ ಅವರಿಗೆ 32ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೆ. ಲತಾ ಅವರು ಆದೇಶ ಮಾಡಿದ್ದಾರೆ.
ಬೆಂಗಳೂರಿನ ಶಿವಕುಮಾರ್ ಎಂಬವರು ನೀಡಿದ ದೂರಿನ ಅನ್ವಯ ಶೇಷಾದ್ರಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295ಎ ಮತ್ತು 505ಬಿ ಅಡಿ ಎಫ್’ಐಆರ್ ದಾಖಲಿಸಿ, ಮಂಗಳವಾರ ಚೇತನ್ ಅವರನ್ನು ಬಂಧಿಸಲಾಗಿತ್ತು.
ಅರ್ಜಿದಾರರ ಪರ ವಕೀಲ ಸುನೀಲ್ ಕುಮಾರ್ ಗುನ್ನಾಪುರ ಅವರು “ಉರಿಗೌಡ ಮತ್ತು ನಂಜೇಗೌಡ ಎಂಬವವರು ಟಿಪ್ಪುವನ್ನು ಕೊಂದರು ಎಂಬುದನ್ನು ಬಿಜೆಪಿ ಮತ್ತು ಸಂಘ ಪರಿಹಾರ ಸೃಷ್ಟಿಸಿದ್ದು, ಚೇತನ್ ಅವರು ಇದು ಒಂದು ಸುಳ್ಳು ಎಂದು ಹೇಳಿದ್ದಾರೆ. ಇದಕ್ಕೆ ಇತಿಹಾಸದಲ್ಲಿ ಯಾವುದೇ ದಾಖಲೆ ಇಲ್ಲ ಎಂದು ಒಕ್ಕಲಿಗ ಸಮುದಾಯ ಸ್ವಾಮೀಜಿ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಸುಳ್ಳುಗಳನ್ನು ಪ್ರಶ್ನೆ ಮಾಡಬೇಕು. ಚೇತನ್ ಅವರು ಅದನ್ನು ಮಾಡಿದ್ದಾರೆ. ಒಕ್ಕಲಿಗರು ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ವೈಷಮ್ಯ ಉಂಟು ಮಾಡುವ ಕೃತ್ಯವನ್ನು ಮಾಡಬಾರದು ಎಂದು ಚೇತನ್ ಹೇಳಿದ್ದಾರೆ. ಹೀಗಾಗಿ, ಐಪಿಸಿ ಸೆಕ್ಷನ್ 295 ಇಲ್ಲಿ ಅನ್ವಯಿಸುವುದಿಲ್ಲ ಎಂದು ವಾದಿಸಿದರು.
“1927ರಲ್ಲಿ ಮಾರ್ಚ್ 20ರಂದು ಬಾಬಾ ಸಾಹೇಬ್ ಮತ್ತು ಸಾವಿರಾರು ದಲಿತರು ಮಹಾಡ್ ನಗರದ ಚೌಡರ್ ಕೆರೆಯಲ್ಲಿ ನೀರು ಕುಡಿದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಅಸ್ಪೃಶ್ಯತೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಮೂಲಕ ದುರ್ಬಲ ವರ್ಗದವರ ಪರವಾಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾರ ಬಗ್ಗೆಯೂ ಅವರು ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಯಾವುದೇ ಕೃತ್ಯವನ್ನೂ ಚೇತನ್ ಅವರು ಎಸಗಿಲ್ಲ” ಎಂದು ವಾದಿಸಿದ್ದರು