ಲಕ್ನೋ: ಒಸಾಮಾ ಬಿನ್ ಲಾದೆನ್ ಚಿತ್ರವನ್ನು ತನ್ನ ಕಚೇರಿಯಲ್ಲಿ ಹಾಕಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಪಿಸಿಎಲ್) ನ ಉಪ ವಿಭಾಗೀಯ ಅಧಿಕಾರಿಯನ್ನು (ಎಸ್’ಡಿಒ) ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ರವೀಂದ್ರ ಪ್ರಕಾಶ್ ಗೌತಮ್ ವಜಾಗೊಂಡ ಅಧಿಕಾರಿ ಎಂದು ತಿಳಿದುಬಂದಿದೆ.
ಈಗ ವಜಾಗೊಂಡ ಯುಪಿ ಸರ್ಕಾರಿ ಅಧಿಕಾರಿಯ ಕಚೇರಿಯಿಂದ ಒಸಾಮಾ ಬಿನ್ ಲಾದೆನ್ ಚಿತ್ರವನ್ನು ತೋರಿಸುವ ದೃಶ್ಯಗಳು ವೈರಲ್ ಆಗಿತ್ತು.
ಒಸಾಮಾ ಫೋಟೋ ಹಾಕಿದ್ದ ರವೀಂದ್ರ ಪ್ರಕಾಶ್ ಗೌತಮ್ ಅವರನ್ನು ವಜಾಗೊಳಿಸಲು ಯುಪಿಪಿಸಿಎಲ್ ಅಧ್ಯಕ್ಷ ಎಂ ದೇವರಾಜ್ ಅವರು ಆದೇಶಿಸಿದ್ದರು.
ಅಮೆರಿಕ ಸೇನೆಯಿಂದ ಹತ್ಯೆಯಾಗಿದ್ದಾನೆ ಎನ್ನಲಾದ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾದೆನ್ ಫೋಟೋವನ್ನು ಗೌತಮ್ ತನ್ನ ಆರಾಧ್ಯ ದೈವ ಎಂದು ಕರೆದು ಅವನ ಚಿತ್ರವನ್ನು ತನ್ನ ಕಚೇರಿಯಲ್ಲಿ ಹಾಕುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ದಕ್ಷಿಣಾಂಚಲ್ ವಿದ್ಯುತ್ ವಿಟ್ರಾನ್ ನಿಗಮ್ ಎಂಡಿ ಅಮಿತ್ ಕಿಶೋರ್ ತಿಳಿಸಿದ್ದಾರೆ.
ಗೌತಮ್ ಅವರು ಜೂನ್ 2022 ರಲ್ಲಿ ಫರೂಕಾಬಾದ್ ಜಿಲ್ಲೆಯ ಕಾಯಂಗಂಜ್ ಉಪವಿಭಾಗ -2 ರಲ್ಲಿ ಕೆಲಸಕ್ಕೆ ನಿಯೋಜನೆಗೊಂಡಾಗ ಈ ಚಿತ್ರವನ್ನು ಹಾಕಿದ್ದರು.