Home ಟಾಪ್ ಸುದ್ದಿಗಳು ಚೀನಾ ಬೆಂಬಲಿತ ಕಾರ್ಯಾಗಾರಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿ: ತೀವ್ರ ವಿರೋಧದ ಬಳಿಕ ನಿರ್ಧಾರ ಬದಲಿಸಿದರೇ ಮಾಜಿ...

ಚೀನಾ ಬೆಂಬಲಿತ ಕಾರ್ಯಾಗಾರಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿ: ತೀವ್ರ ವಿರೋಧದ ಬಳಿಕ ನಿರ್ಧಾರ ಬದಲಿಸಿದರೇ ಮಾಜಿ ಸಿಎಂ?

ಬೆಂಗಳೂರು: ಇಲ್ಲಿನ‌ ಚಿತ್ರಕಲಾ ಸಭಾಂಗಣದಲ್ಲಿ ಆ. 28ರಂದು ಹಮ್ಮಿಕೊಳ್ಳಲಾಗಿದ್ದ ಚೀನಾ ಬೆಂಬಲಿತ ಕಾರ್ಯಾಗಾರದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿರುವುದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ವಿರೋಧದ ಬಳಿಕ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ‌ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ.

‘ಪ್ರೆಸಿಡೆಂಟ್ ಆಂಡ್ ಎಕ್ಸಿಕ್ಯುಟಿವ್ ಮೆಂಬರ್ಸ್ ಆಫ್ ಇಂಡಿಯಾ – ಚೈನಾ ಫ್ರೆಂಡ್‌ಶಿಪ್ ಅಸೋಸಿಯೇಶನ್, ಕರ್ನಾಟಕ’ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ‘ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕಾ ಸಾಮ್ರಾಜ್ಯಶಾಹಿಯ ಹಸ್ತಕ್ಷೇಪ’ ಎಂಬ ವಿಚಾರವಾಗಿ ಕಾರ್ಯಾಗಾರ ಮತ್ತು ಚೈನೀಸ್ ಫೋಟೋಗ್ರಪಿಕ್ ಮೇಳ ಕೂಡ ಆಯೋಜಿಸಲಾಗಿತ್ತು.

ಆದರೆ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ‌ ಮುಖ್ಯ ಅತಿಥಿಗಳ ಹೆಸರಿನ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ‌ ಹೆಸರು ಮೊದಲ ಸಾಲಿನಲ್ಲಿದ್ದು, ಚೀನಾ ರಾಯಭಾರಿ ಸನ್ ವೈಡೋಂಗ್ ಮತ್ತು ಚೀನಾದ ಕಾನ್ಸುಲೇಟ್ ಜನರಲ್ ಕೊನ್ ಕ್ಸಿಯಾನ್ಞುವಾ ಅವರ ಹೆಸರೂ ಇದೆ.

ಆಮಂತ್ರಣ ಪತ್ರಿಕೆ ಹೊರಬಂದ ಕೂಡಲೆ ಇದು ವಿವಾದವಾಗಿದ್ದು, ಸಿದ್ದರಾಮಯ್ಯ ಚೀನಾ‌ ಬೆಂಬಲಿತ ಕಾರ್ಯಕ್ರಮದಲ್ಲಿ ಭಾಗವಹಿಸುವುದು ದೇಶ ವಿರುದ್ಧ ಎಂಬ ಆರೋಪಗಳು ಕೇಳಿ ಬಂದಿತ್ತು. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯರನ್ನು ಆಮಂತ್ರಿಸಿದವರು ಯಾರು, ಯಾವ ಹಿತಾಸಕ್ತಿಯಿಂದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡರು ಎಂಬ ವಿಚಾರವಾಗಿಯೂ ಚರ್ಚೆ ನಡೆದಿತ್ತು.

ಗಡಿಯಲ್ಲಿ ಚೀನಾದ ಪ್ರಚೋದನಾಕಾರಿ ವರ್ತನೆ, ಹಿಂದೂ ಮಹಾಸಾಗರದಲ್ಲಿ ನೌಕಾ ನೆಲೆಯ ಅಭಿವೃದ್ಧಿ, ಶ್ರೀಲಂಕಾಕೆ ಬಂದ ಬೇಹುಗಾರಿಕಾ ಹಡಗು ಮೊದಲಾದ ವಿಚಾರವಾಗಿ ಭಾರತಕ್ಕೆ ಚೀನಾ ವಿಚಾರವಾಗಿ ಹಲವು ಆತಂಕಗಳಿದ್ದರೂ, ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿರುವುದು ಟೀಕೆಗೆ ಕಾರಣವಾಗಿತ್ತು.

ಈ ವಿವಾದದ ಬೆನ್ನಲ್ಲೇ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ‘India-China Friendship Association ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ‌ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ದಾಂತಿಕವಾಗಿ ನನ್ನ‌ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ಧವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ’ ಎಂದಿದ್ದಾರೆ.

Join Whatsapp
Exit mobile version