ದುಬೈ: ಶ್ರೀಲಂಕಾ ಬೌಲರ್ಗಳ ಮೇಲೆ ದಂಡೆತ್ತಿ ಹೋದ ಅಪ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್ಮನ್ಗಳು, ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 9 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 106 ರನ್ಗಳ ಸುಲಭ ಸವಾಲು ಪಡೆದಿದ್ದ ಅಫ್ಘಾನ್ ತಂಡ, ಕೇವಲ 2 ವಿಕೆಟ್ ನಷ್ಟದಲ್ಲಿ 10.1 ಓವರ್ಗಳಲ್ಲಿ ಗುರಿ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಹಝ್ರತುಲ್ಲಾ ಝಜಾಯ್ ಮತ್ತು ವಿಕೆಟ್ ಕೀಪರ್ ರಹ್ಮಾನುಲ್ಲಾ ಗುರ್ಬಾಝ್, ಲಂಕಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಝಝಾಯಿ 37 ರನ್ಗಳಿ ಅಜೇಯಾರಗುಳಿದರು. ಗುರ್ಬಾಝ್ ಕೇವಲ 18 ಎಸೆತಗಳನ್ನು ಎದುರಿಸಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳ ನೆರವಿನಿಂದ 40 ರನ್ಗಳಿಸಿದ್ದ ವೇಳೆ ಹಸರಂಗ ಡಿಸಿಲ್ವಾ ಎಸೆತದಲ್ಲಿ ಮುನ್ನಗ್ಗಿ ಬಾರಿಸಲು ಹೋಗಿ ಕ್ಲೀನ್ ಬೌಲ್ಡ್ ಆದರು.
105 ರನ್ಗಳಿಗೆ ಶ್ರೀಲಂಕಾ ಆಲೌಟ್
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಲಂಕಾ, ಅಫ್ಘಾನಿಸ್ತಾನದ ಬಿಗು ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ, 19. 4 ಓವರ್ಗಳಲ್ಲಿ ಕೇವಲ 105 ರನ್ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು. ಟಾಸ್ ಗೆದ್ದ ಅಫ್ಘಾನಿಸ್ತಾನ, ಲಂಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಆದರೆ ಫಝಲ್ ಫಾರೂಖಿ ಮತ್ತು ನಾಯಕ ನಬಿ ಬೌಲಿಂಗ್ ದಾಳಿಯೆದುರು ಲಂಕಾ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು.
ಭನುಕಾ ರಾಜಪಕ್ಷ 38ರನ್ ಮತ್ತು ಚಮಿಕಾ ಕರುಣರತ್ನೆ 31 ರನ್ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ತಂಡದ ಏಳು ಮಂದಿ ಬ್ಯಾಟ್ಸ್ಮನ್ಗಳು ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ. ನಾಯಕ ದಾಸುನ್ ಚನಕ ಸೇರಿದಂತೆ ಮೂವರು ಖಾತೆ ತರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು.
ಅಫ್ಘಾನಿಸ್ತಾನದ ಪರ ಬೌಲಿಂಗ್ ಆರಂಭಿಸಿದ್ದ ಫಝಲ್ ಫಾರೂಖಿ 3.4 ಓವರ್ಗಳ ದಾಳಿಯಲ್ಲಿ ಕೇವಲ 11 ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಅನುಭವಿ ಸ್ಪಿನ್ನರ್ ಮುಜೀಬ್ ಉರ್ ರಹ್ಮಾನ್ ಮತ್ತು ನಾಯಕ ಮುಹಮ್ಮದ್ ನಬಿ ತಲಾ ಎರಡು ವಿಕೆಟ್ ಪಡೆದರು. ನವೀನ್ ಉಲ್ ಹಕ್ ಒಂದು ವಿಕೆಟ್ ಕಿತ್ತರು. ಪ್ರಮುಖ ಸ್ಪಿನ್ನರ್ ರಶೀದ್ ಖಾನ್ 4 ಓವರ್ ಎಸೆದು ಕೇವಲ 12 ರನ್ನೀಡಿದರಾರೂ, ವಿಕೆಟ್ ಪಡೆಯುವಲ್ಲಿ ವಿಫಲರಾದರು.