ಚಿತ್ರದುರ್ಗ: ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ವತಿಯಿಂದ ಇಂದು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಕಾಯಕ ಜನೋತ್ಸವ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಿವಿಧ ಮಠಾಧೀಶರು ಮಾಚಿದೇವ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ಶಿವಮೂರ್ತಿ ಮುರುಘಾ ಶರಣರು, ಪುರುಷೋತ್ತಮಾನಂದ ಪುರಿ ಸ್ವಾಮಿ, ಸಿದ್ದರಾಮೇಶ್ವರ ಸ್ವಾಮಿ, ಬಸವ ಮಾಚಿದೇವ ಸ್ವಾಮಿ, ಶಾಂತವೀರ ಸ್ವಾಮಿ, ರೇಣುಕಾನಂದ ಸ್ವಾಮಿ, ಮಾಜಿ ಸಚಿವರಾದ ಸುಧಾಕರ್, ಶಾಸಕರಾದ ಭೀಮಾ ನಾಯಕ, ರಘುಮೂರ್ತಿ, ಬೈರತಿ ಸುರೇಶ್, ಮಾಜಿ ಶಾಸಕರಾದ ಗೋವಿಂದಪ್ಪ ಹಾಜರಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಇಂದು ನನಗೆ ನೀಡಿರುವ ಪ್ರಶಸ್ತಿ ಜೊತೆಗೆ ಶ್ರೀಗಳು ಒಂದು ಲಕ್ಷ ರೂ ನಗದು ಘೋಷಣೆ ಮಾಡಿದ್ದಾರೆ ಎಂದು ನಮ್ಮ ಶಾಸಕರು, ಮಠದ ಅನುಯಾಯಿ ಆದ ಭೀಮಾ ನಾಯ್ಕ್ ಹೇಳಿದರು. ಆ ನಗದಿಗೆ ನನ್ನ ಕೈಯಿಂದ ಒಂದು ಲಕ್ಷ ಸೇರಿಸಿ ಒಟ್ಟು ಎರಡು ಲಕ್ಷ ರೂಪಾಯಿ ಹಣವನ್ನು ಮಠದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ ನೀಡುತ್ತಿದ್ದೇನೆ. ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು.
ಬಸವ ಮಾಚಿದೇವ ಶ್ರೀಗಳ ನಾಲ್ಕನೇ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಇಂದು ನಡೆಯುತ್ತಿದೆ. ಈ ಹಿಂದೆ ಅವರ ಪೀಠಾರೋಹಣಕ್ಕೂ ನಾನು ಬಂದಿದ್ದೆ. ಶ್ರೀಗಳು ಮಠದ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದು ಹಾರೈಸುತ್ತೇನೆ ಎಂದರು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಾತಿ ವ್ಯವಸ್ಥೆ ಸೃಷ್ಟಿ ಮಾಡಿದವು. ಇದರಿಂದ ಮೇಲು, ಕೀಳು, ಅಸಮಾನತೆ ಹುಟ್ಟಿತು. ಹೀಗಾಗಿ ಕೆಲವು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಯಿತು. ಮೇಲ್ಜಾತಿಗಳು ಅಧಿಕಾರ, ಹಣ, ಆಸ್ತಿ, ಅಕ್ಷರ ಕಲಿಯುವ ಹಕ್ಕನ್ನು ನೀಡಲಾಯಿತು. ಚಾತುರ್ವರ್ಣ ವ್ಯವಸ್ಥೆಯಲ್ಲಿ ಕೆಳ ಜಾತಿಗಳು ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಕಾರಣಕ್ಕೆ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಲು ಕಾರಣವಾಯಿತು. ಭಾರತಕ್ಕೆ ಬ್ರಿಟಿಷರು ಬಂದಮೇಲೆ ಕೆಳ ವರ್ಗದ ಜನರಿಂದ ಕಾರಕೂನರ ಕೆಲಸ ಮಾಡಿಸಲು ಶಿಕ್ಷಣ ನೀಡಲು ಆರಂಭಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಸಾಕ್ಷರತೆ 16% ಇತ್ತು, ಇಂದು 78% ಗೆ ಏರಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣವಾಗಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವ ಧರ್ಮ ನಮ್ಮದಾಗಬೇಕು. ಪ್ರೀತಿ ಈ ಧರ್ಮದ ಭಾಷೆಯಾಗಬೇಕು. ಹಿಂದೂ ಧರ್ಮದಲ್ಲಿ ಜಾತಿ ಇಲ್ಲ, ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಿಂದುತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದಾರೆ. ನಾವೆಲ್ಲರೂ ಹಿಂದೂಗಳೇ ಆಗಿದ್ದರೂ ನಮ್ಮಲ್ಲೇ ಏಕೆ ಈ ಅಸಮಾನತೆ? ಎಂದು ಪ್ರಶ್ನಿಸಿದರು.
ಆರೋಗ್ಯ ಕೆಟ್ಟಾಗ ಜಾತಿ, ಧರ್ಮ ನೋಡದೆ ಯಾರದ್ದೋ ರಕ್ತ ಪಡೆದು ಬದುಕಿ, ಹುಷಾರಾದ ಮೇಲೆ ನೀನು ಬೇರೆ ಜಾತಿಯವನು, ನೀನು ಅಸ್ಪೃಶ್ಯ ದೂರು ಇರು, ನೀನು ಬೇರೆ ಧರ್ಮದವನು ಹತ್ತಿರ ಬರಬೇಡ ಎನ್ನುವುದು ಅಮಾನವೀಯತೆ ಅಲ್ಲದೆ ಬೇರೇನು?
ನಾನು ಕೂಡ ಜಾತಿ ವ್ಯವಸ್ಥೆಯ ವಿರೋಧಿ, ಆದರೆ ಸಮಾಜದಲ್ಲಿನ ಕೆಳ ಜಾತಿಗಳನ್ನು ಗುರುತಿಸುವ ಮೂಲಕ ಅವುಗಳಿಗೆ ಪ್ರೋತ್ಸಾಹ ನೀಡಿ ಆ ಮೂಲಕ ಜಾತಿ ವ್ಯವಸ್ಥೆಯನ್ನು ಕಿತ್ತು ಬಿಸಾಕಬೇಕು ಎಂದು ನಂಬಿದ್ದೇನೆ. ಜಾತಿ ಸಮ್ಮೇಳನಗಳು, ಜಾತಿ ಮಠಗಳು ಸ್ಥಾಪನೆಯಾಗದೆ ಹೋದರೆ ಶೋಷಿತ ಜಾತಿಗಳು ಜಾಗೃತರಾಗೋದು ಹೇಗೆ? ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋದು ಹೇಗೆ? ಹೀಗಾಗಿಯೇ ಲೋಹಿಯಾ ಅವರು ಶೋಷಿತ ಜಾತಿಗಳು ಜಾತಿ ಸಮ್ಮೇಳನಗಳನ್ನು ಮಾಡಿದರೆ ತಪ್ಪಿಲ್ಲ ಎಂದು ಹೇಳಿದ್ದರು. ಅವಕಾಶಗಳಿಂದ ವಂಚಿತರಾದ ಸಮುದಾಯಗಳು ಅಂಬೇಡ್ಕರರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರಗಳನ್ನು ಪಾಲನೆ ಮಾಡಲೇಬೇಕು ಎಂದು ವಿರೋಧ ಪಕ್ಷದ ನಾಯಕ ಹೇಳಿದರು.
ಶೋಷಿತ ಸಮಾಜಗಳನ್ನು ಮೇಲೆತ್ತಲು ಆ ಸಮಾಜದ ಗುರುಗಳು, ಮಠಾಧೀಶರಿಂದ ಸಾಧ್ಯವಿದೆ. ಈ ಮಠಾಧೀಶರು ಗುರುವಿನ ಸ್ಥಾನದಲ್ಲಿ ನಿಂತು ಹೋರಾಟದ ಹಾದಿ ತೋರಿಸುತ್ತಾರೆ. ಇವರನ್ನು ಬಿಟ್ಟರೆ ಇನ್ಯಾರು ಶೋಷಿತರ ನೆರವಿಗೆ ಧಾವಿಸಲ್ಲ. ಕೆಲವರು ಬಾಯಿ ಮಾತಲ್ಲಿ ಹೇಳುತ್ತಾರಷ್ಟೆ. ಜಾತಿ ವ್ಯವಸ್ಥೆಯಿಂದಾಗಿ ಸಮಾಜದಲ್ಲಿ ಗುಲಾಮಗಿರಿ ನೆಲೆಸಿದೆ. ಮೇಲ್ಜಾತಿಯ ಬಡವನಿಗೆ ಸಮಾಜದಲ್ಲಿ ಇರುವ ಬೆಲೆ ಕೆಳ ಜಾತಿಯ ಶ್ರೀಮಂತನಿಗೆ ಸಿಗಲ್ಲ. ಇದಕ್ಕೆ ಕೆಳ ವರ್ಗದ ಜನ ಸ್ವಾಭಿಮಾನ ಬೆಳೆಸಿಕೊಳ್ಳುವುದೊಂದೇ ಪರಿಹಾರ. ಈ ದೇಶ ಎಲ್ಲಾ ಜನರ ಆಸ್ತಿ. ತೆರಿಗೆ ಕಟ್ಟುವಾಗ ಇಲ್ಲದ ಜಾತಿ, ಸೌಲಭ್ಯ ಅನುಭವಿಸುವಾಗ ಮಾತ್ರ ಏಕೆ ಅಡ್ಡಿಯಾಗುತ್ತದೆ? ಸರ್ಕಾರದ ಸವಲತ್ತುಗಳು ಎಲ್ಲಾ ಜಾತಿಯ ಹಕ್ಕು ಅದಕ್ಕಾಗಿ ಶೋಷಿತರು ಹೋರಾಟ ನಡೆಸಬೇಕು ಎಂದು ಹೇಳಿದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರ ನಾನು ಮೊದಲಿನಿಂದಲೂ ಇದ್ದೆ ಮುಂದೆಯೂ ಇರುತ್ತೇನೆ. ನಾವು ಹಲವು ಗಣ್ಯರ ಜಯಂತಿ ಆಚರಣೆ ಮಾಡಲು ಹೊಸದಾಗಿ ಆರಂಭ ಮಾಡಿದ್ದು ಅಂತಹ ಮಹಾನ್ ವ್ಯಕ್ತಿಗಳಿಂದ ಸ್ಪೂರ್ತಿ ಪಡೆಯಲಿ ಎಂದು. ಬಜೆಟ್ ಗಾತ್ರ ಹೆಚ್ಚಾದಂತೆ ಎಸ್.ಸಿ.ಪಿ / ಟಿ.ಎಸ್.ಪಿ ಅನುದಾನದ ಗಾತ್ರ ಹೆಚ್ಚಾಗಬೇಕಿತ್ತು. ಆದರೆ ಕಡಿಮೆಯಾಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ಈ ಯೋಜನೆಗೆ ರೂ. 30,150 ಕೋಟಿ ಹಣ ನೀಡಿದ್ದೆ, ಬಿಜೆಪಿ ಸರ್ಕಾರ ಬಂದಮೇಲೆ ಅದು ರೂ. 25,000 ಕೋಟಿಗೆ ಇಳಿದಿದೆ.
ಸಾಮಾಜಿಕ ನ್ಯಾಯದ ಬದ್ಧತೆಯಿರುವ ರಾಜಕಾರಣಿಗಳು ಯಾರೇ ಆಗಲಿ ಅವರನ್ನು ಮಾತ್ರ ಶೋಷಿತ ಜನರು ನಂಬಬೇಕು. ಕೆಲವರು ತಾವು ಶೋಷಿತರ ಪರ ಎಂದು ನಾಟಕವಾಡ್ತಾರೆ ಅಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮೀಸಲಾತಿ ಭಿಕ್ಷೆಯಲ್ಲ, ಹಕ್ಕು. ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಜೀವಂತವಾಗಿರುತ್ತದೆ, ಅಲ್ಲಿಯವರೆಗೂ ಮೀಸಲಾತಿ ಇರುತ್ತದೆ.
ಅನ್ನಪೂರ್ಣಮ್ಮನವರ ವರದಿ ಆಧರಿಸಿ ಮಡಿವಾಳ ಸಮಾಜಕ್ಕೆ ಎಸ್.ಸಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಇಂದು ನನ್ನೆದುರು ಇಟ್ಟಿದ್ದೀರ. ನಾನು ಈ ಸರ್ಕಾರದ ಮೇಲೆ ಒತ್ತಡ ಹೇರಿ, ಮೀಸಲಾತಿ ಕೊಡಿಸಲು ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ಬಿಜೆಪಿಯವರು ಈ ಕೆಲಸ ಮಾಡಿಲ್ಲ ಎಂದರೆ ಮುಂದೆ ಮತ್ತೆ ನಾವೆ ಅಧಿಕಾರಕ್ಕೆ ಬರುತ್ತೇವೆ, ಆಗ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇನ್ನು ರಾಜಕೀಯ ಪ್ರಾತಿನಿಧ್ಯದ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಕೂಡ ನಾನು ಬೆಂಬಲಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಮಡಿವಾಳ ಸಮಾಜದವರಿಗೂ ಟಿಕೆಟ್ ನೀಡುತ್ತೇವೆ, ಒಂದು ವೇಳೆ ಚುನಾವಣೆಯಲ್ಲಿ ಅವರು ಸೋತರೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವುದು ಖಚಿತ. ಇಷ್ಟನ್ನು ನಾನು ಖಂಡಿತಾ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.