ಮೀರತ್: ಪ್ರಧಾನಿ ಮೋದಿಯವರನ್ನು ಸುಳ್ಳುಗಾರ ಎಂದು ಕರೆದ ವೈರಲ್ ವೀಡಿಯೋವೊಂದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್ಪಿ) ದ ಮುಖಂಡ ಅತುಲ್ ಪ್ರಧಾನ್ ಎಂಬವರ ವಿರುದ್ಧ ಮೀರತ್ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಅಥವಾ ತಪ್ಪು ಮಾಡಿಲ್ಲ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಧ್ವನಿಯೆತ್ತುವ ಪ್ರತಿಯೊಬ್ಬರನ್ನೂ ಬಂಧಿಸುವ ಮೂಲಕ ಸರ್ಕಾರ ಅಧಿಕಾರದ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರಧಾನ್ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಧಾನ್ ವಿರುದ್ಧ ಐಪಿಸಿ ಸೆಕ್ಷನ್ 505 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ದಾರವುಲಾ ಪೊಲೀಸ್ ಠಾಣೆಯ ಅಧಿಕಾರಿ ನರೇಂದ್ರ ಶರ್ಮಾ ತಿಳಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನ್, ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲ ಎಂದು ತಿಳಿಸಿದ್ದಾರೆ.