ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಎದುರು ಗುಂಡಿನ ದಾಳಿ ನಡೆದ ಕೆಲವು ಗಂಟೆಗಳ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಭಾಗವೆಂದು ಹೇಳಲಾದ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಫೇಸ್ಬುಕ್ ಪೋಸ್ಟ್‌ನಲ್ಲಿ ಈಕುರಿತು ಬರೆದ ಅನ್ಮೋಲ್ ಬಿಷ್ಣೋಯ್, ಅಸಂಬದ್ಧವಾಗಿ ಏನೇನೋ ಬರೆದಿದ್ದಾನೆ.
ಅನ್ಮೋಲ್ ಬಿಷ್ಣೋಯ್ ತನ್ನ ಫೇಸ್‌ಬುಕ್ ಪೋಸ್ಟ್ ನಲ್ಲಿ, ಸಲ್ಮಾನ್ ಖಾನ್ ನಿಮಗೆ ಟ್ರೇಲರ್ ತೋರಿಸಲು ನಾವು ಇದನ್ನು ಮಾಡಿದ್ದೇವೆ. ನಾವು ಹೊಂದಿರುವ ಶಕ್ತಿಯ ಬಗ್ಗೆ ನಿಮಗೆ ಒಂದು ಕಲ್ಪನೆ ಬರುತ್ತದೆ ಮತ್ತು ನಮ್ಮನ್ನು ಪರೀಕ್ಷಿಸಬೇಡಿ. ಇದು ನಿಮಗೆ ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಇದರ ನಂತರ, ಗೋಡೆಗಳ ಮೇಲೆ ಅಥವಾ ಯಾವುದೇ ಖಾಲಿ ಮನೆಯ ಮೇಲೆ ಗುಂಡು ಹಾರಿಸಲಾಗುವುದಿಲ್ಲ ಎಂದು ಬರೆದಿದ್ದಾನೆ.
ಅಲ್ಲದೆ, ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಹೆಸರಿನ ಎರಡು ಸಾಕುನಾಯಿಗಳನ್ನು ನಾವು ಹೊಂದಿದ್ದೇವೆ, ಅವುಗಳನ್ನು ನಿಮ್ಮ ದೇವರು ಎಂದು ನೀವು ಪರಿಗಣಿಸುತ್ತೀರಿ. ನಾನು ಹೆಚ್ಚು ಹೇಳಲು ಬಯಸುವುದಿಲ್ಲ. ಜೈ ಶ್ರೀ ರಾಮ್! ಎಂದು ಹೇಳಿದ್ದಾನೆ.
ಇಂದು ಬೆಳಿಗ್ಗೆ 5 ಗಂಟೆ ವೇಳೆಗೆ ಬಾಂದ್ರಾದಲ್ಲಿನ ಸಲ್ಮಾನ್ ಖಾನ್ ಮನೆಯ ಹೊರಗೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಲ್ಮಾನ್ ಖಾನ್ ಭದ್ರತೆಯನ್ನು Y+ ಗೆ ಹೆಚ್ಚಿಸಿದ್ದಾರೆ.
ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಸಹೋದರ ಈ ಅನ್ಮೋಲ್ ಬಿಷ್ಣೋಯ್. ಸದ್ಯ ಈತ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲೂ ಆತನ ಕೈವಾಡವಿತ್ತು ಎನ್ನಲಾಗಿದೆ. ಸಿಧು ಮೂಸೆವಾಲಾ ಹತ್ಯೆಯ ಬಳಿಕ ಅನ್ಮೋಲ್ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದ. ಕಳೆದ ವರ್ಷ ಆತನನ್ನು ಅಜರ್‌ಬೈಜಾನ್‌ನಲ್ಲಿ ಪತ್ತೆಯಾಗಿದ್ದರೂ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ಅಮೆರಿಕದಲ್ಲಿ ಕಂಡುಬಂದಿದ್ದ.
ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆʼʼ ಎಂದು ಬಿಷ್ಣೋಯ್ ಹೇಳಿದ್ದ.