ರಿಯಾದ್: ಸೌದಿ ಅರೇಬಿಯಾಕ್ಕೆ ಹೋಗುವ ಭಾರತೀಯರಿಗೆ ಕಹಿ ಸುದ್ದಿ ಬಂದಿದೆ. ಭಾರತ ಸೇರಿ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ.
ಹಜ್ ಯಾತ್ರೆ ಹಿನ್ನೆಲೆ ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಜ್ ಯಾತ್ರೆಯು ಮುಕ್ತಾಯಗೊಳ್ಳುವವರೆಗೆ ಅಂದರೆ ಜೂನ್ ಮಧ್ಯದವರೆಗೆ ನಿಷೇಧವು ಜಾರಿಯಲ್ಲಿರಲಿದೆ.
ಮುಂಬರುವ ಹಜ್ ಋತುವಿಗೆ ಮುಂಚಿತವಾಗಿ ಸೌದಿ ಅರೇಬಿಯಾ 14 ದೇಶಗಳ ನಾಗರಿಕರಿಗೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ವೀಸಾಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ನಿರ್ಬಂಧಗಳ ಪಟ್ಟಿಯಲ್ಲಿ ಭಾರತ ಮಾತ್ರವಲ್ಲದೇ ಒಟ್ಟು 14 ದೇಶಗಳ ಹೆಸರಿದೆ. ಈ ನಿರ್ಬಂಧಗಳು ಜೂನ್ ಮಧ್ಯಭಾಗದವರೆಗೆ ಜಾರಿಯಲ್ಲಿರುತ್ತವೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ವಾಹಿನಿ ARY ವರದಿ ಮಾಡಿದೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ ಮತ್ತು ಯೆಮೆನ್ ದೇಶಗಳು ಬಾಧಿತ ದೇಶಗಳಲ್ಲಿ ಸೇರಿವೆ.
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ವೀಸಾ ನಿಯಮಾವಳಿಗಳನ್ನು ಬಿಗಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ವರ್ಷ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 13, 2025 ಕೊನೆಯ ದಿನವಾಗಿದೆ. ಆ ಬಳಿಕ ಹಜ್ ಮುಕ್ತಾಯದವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ.
ಹಜ್ ಯಾತ್ರಿಕರಿಗೆ ಅನುಕೂಲ ಕಲ್ಪಿಸಲು, ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಯಾತ್ರಿಕರ ಅನುಕೂಲಕ್ಕಾಗಿ 16 ಭಾಷೆಗಳಲ್ಲಿ ಡಿಜಿಟಲ್ ಮಾರ್ಗದರ್ಶಿಯನ್ನು ಪ್ರಾರಂಭಿಸಿದೆ. ಇದು ಉರ್ದು, ಇಂಗ್ಲಿಷ್, ಅರೇಬಿಕ್ ಮತ್ತು ಫ್ರೆಂಚ್ ಭಾಷೆಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಜೂನ್ ಮಧ್ಯಭಾಗದ ವೇಳೆಗೆ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಸಾಮಾನ್ಯ ವೀಸಾ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.