Home ಕ್ರೀಡೆ ಲೈಂಗಿಕ ದೌರ್ಜನ್ಯ ಆರೋಪ: ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಪ್ರಕರಣ ದಾಖಲು

ಲೈಂಗಿಕ ದೌರ್ಜನ್ಯ ಆರೋಪ: ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಪ್ರಕರಣ ದಾಖಲು

0

2025 ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಂಡದ ವೇಗದ ಬೌಲರ್ ಯಶ್ ದಯಾಳ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಯುವತಿಯೊಬ್ಬಳು, ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು, ಇದೀಗ ಪೊಲೀಸರು ಪ್ರಕರಣವನ್ನು ಸಹ ದಾಖಲಿಸಿದ್ದಾರೆ. ಯುವತಿಯ ಆರೋಪಗಳು ನಿಜವೆಂದು ಸಾಭೀತಾದರೆ ಯಶ್ ದಯಾಳ್ ಜೈಲು ಪಾಲಾಗಲಿದ್ದು, ಇದರಿಂದ ಅವರ ವೃತ್ತಿಜೀವನವು ಅಂತ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.

ಕೆಲವು ದಿನಗಳ ಹಿಂದೆ, ಮದುವೆಯ ಆಮಿಷವೊಡ್ಡಿ ಯಶ್ ದಯಾಳ್ ಆರ್ಥಿಕ, ಮಾನಸಿಕ ಮತ್ತು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಳು. ಇದರಲ್ಲಿ ಯಶ್ ದಯಾಳ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಳು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ದೂರಿನಲ್ಲಿ ಯಶ್ ದಯಾಳ್ ಬಹಳ ವರ್ಷಗಳಿಂದ ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಉಲ್ಲೇಖಸಿದ್ದಳು.

ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯಶ್ ದಯಾಳ್ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಳು. ಕಳೆದ 5 ವರ್ಷಗಳಿಂದ ಯಶ್ ದಯಾಳ್ ಜೊತೆ ಸಂಬಂಧ ಹೊಂದಿದ್ದಾಗಿ ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಳು. ಅಲ್ಲದೆ ನನ್ನನ್ನು ಮದುವೆಯಾಗುವಂತೆ ಕೇಳಿಕೊಂಡಾಗ ದಯಾಳ್, ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿದ್ದಳು.

ಯಶ್ ದಯಾಳ್ ತನ್ನ ಜೊತೆಗೆ ಇನ್ನೂ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ದೂರಿದ್ದ ಯುವತಿ, ಇಬ್ಬರ ವಾಟ್ಸಾಪ್ ಚಾಟ್​ನ ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಕರೆಗಳು ಮತ್ತು ಫೋಟೋಗಳ ಪುರಾವೆಗಳನ್ನು ಪೊಲೀಸರಿಗೆ ನೀಡಿದ್ದಳು. ಇದೀಗ ಪೊಲೀಸರು ಈ ವಿಷಯದಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಗೆ ಮುಂದಾಗಿದ್ದಾರೆ. ಈ ಬಗ್ಗೆ ಯಶ್ ದಯಾಳ್ ಬಹಿರಂಗವಾಗಿ ಯಾವುದೇ ಸ್ಪಷ್ಟನೇ ನೀಡದಿದ್ದರೂ, ದಯಾಳ್ ಅವರ ತಂದೆ ಮಾತ್ರ ಈ ಹುಡುಗಿ ಬಗ್ಗೆ ನಮಗೇನು ತಿಳಿದಿಲ್ಲ. ಈ ಹುಡುಗಿ ಈ ಆರೋಪಗಳನ್ನು ಏಕೆ ಮಾಡಿದ್ದಾಳೆಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version