ಹರಿಹರ: ಈ ವರ್ಷದ ಬಜೆಟ್ಟಿನಲ್ಲಿ ಘೋಷಿಸಿರುವ 7 ನೂತನ ವಿಶ್ವವಿದ್ಯಾಲಯಗಳನ್ನು ಇನ್ನು 3 ತಿಂಗಳಲ್ಲಿ ಸ್ಥಾಪಿಸಲಾಗುವುದು ಮತ್ತು 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಉನ್ನತೀಕರಣವನ್ನು ಸಹ ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಲ್ಲಿನ ಪಂಚಮಚಾಲಿ ಪೀಠದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ, ಸಮಕಾಲೀನ ಕೌಶಲ್ಯ ಮತ್ತು ಕನಸಿನ ಉದ್ಯೋಗ ಈ ಮೂರಕ್ಕೆ ಸರಕಾರವು ಆದ್ಯತೆ ಕೊಟ್ಟಿದ್ದು, ಆಮೂಲಾಗ್ರ ಬದಲಾವಣೆಗಳನ್ನು ತರುತ್ತಿದೆ. ಇದಕ್ಕೆ ತಕ್ಕಂತೆ, ಇದುವರೆಗೂ ಯಾವುದೇ ವಿ.ವಿ.ಯನ್ನು ಹೊಂದಿರದೆ ಇರುವಂತಹ ಜಿಲ್ಲೆಗಳಲ್ಲಿ ಕನಿಷ್ಠ ಒಂದು ವಿ.ವಿ.ಯನ್ನಾದರೂ ಆರಂಭಿಸಲಾಗುವುದು’ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಲ್ಲಿ ಕರ್ನಾಟಕವು ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದೆ. ಇದು ಶೈಕ್ಷಣಿಕ ಗುಣಮಟ್ಟದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದ್ದು, ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಜತೆಗೆ, ಸರಕಾರವು ರೂಪಿಸಿರುವ
ಸರ್ವರಿಗೂ ಉದ್ಯೋಗ’ದಂತಹ ನೀತಿಗಳಿಂದ ನಿರುದ್ಯೋಗ ಸಮಸ್ಯೆ ಕೂಡ ನಿವಾರಣೆಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಮಠಗಳು ಧಾರ್ಮಿಕ ಚಟುವಟಿಕೆಗಳ ಜತೆಗೆ, ಯುವಜನರ ಬದುಕಿಗೆ ನೆರವಾಗಬಲ್ಲಂತಹ ರಚನಾತ್ಮಕ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕು. ಅಲ್ಲದೆ, ಸಮಾಜಕ್ಕೆ ಮಾರ್ಗದರ್ಶನವನ್ನೂ ಮಾಡಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಮಠವು ಶ್ರೀ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಿರುವುದು ಉಳಿದ ಮಠಗಳಿಗೆ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಡೀ ಪಾಲಿಟೆಕ್ನಿಕ್ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಲಾಗಿದ್ದು, 4,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದಲ್ಲಿ 150 ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಪೂರೈಸಲಾಗುತ್ತಿದೆ. ಅಲ್ಲದೆ, ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಪಾಲಿಟೆಕ್ನಿಕ್ ಶಿಕ್ಷಣದಲ್ಲಿ ಇಂದು 70 ಸಾವಿರ ವಿದ್ಯಾರ್ಥಿಗಳ ಕಲಿಕೆ ಸಾಧ್ಯವಾಗುತ್ತಿದ್ದು, ಇಲ್ಲಿ 47 ಬಗೆಯ ಕೋರ್ಸುಗಳು ಲಭ್ಯವಿವೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿಯೂ ಇದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಇರುವಂತಹ ಟ್ವಿನ್ನಿಂಗ್ ಕಾರ್ಯಕ್ರಮ ಬೇರೆಲ್ಲೂ ಇಲ್ಲ. ವಿದೇಶಿ ವಿ.ವಿ.ಗಳೊಂದಿಗೆ ಒಡಂಬಡಿಕೆಗಳಿಂದಾಗಿ ರಾಜ್ಯದ ಬಡಕುಟುಂಬಗಳ ಮಕ್ಕಳು ಕೂಡ ಇಂದು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರ ಖರ್ಚುವೆಚ್ಚವನ್ನೆಲ್ಲ ಸರಕಾರವೇ ಭರಿಸುತ್ತಿದೆ. ಮುಂಬರುವ ದಿನಗಳಲ್ಲಿ ಇಂತಹ ಒಡಂಬಡಿಕೆಗಳು ರಾಜ್ಯದ ಎಲ್ಲ ವಿ.ವಿ.ಗಳ ವ್ಯಾಪ್ತಿಗಳಲ್ಲೂ ಸಾಧ್ಯವಾಗಲಿದೆ. ಜತೆಗೆ, ಬೋಧನೆಗೆ ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅಳವಡಿಸಿಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಸಂಸದರಾದ ಸಿದ್ಧೇಶ್ ಮತ್ತು ದೇವೇಂದ್ರಪ್ಪ, ಸಚಿವ ಶಂಕರ ಮುನೇನಕೊಪ್ಪ ಮುಂತಾದವರು ಉಪಸ್ಥಿತರಿದ್ದರು.