►► ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ, ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ
ಬೆಂಗಳೂರು: ರಾಜ್ಯಾದ್ಯಂತ ಚೆಡ್ಡಿ ಸುಡುವ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, RSS ತಂಟೆಗೆ ಬಂದ್ರೆ ಹುಷಾರ್ ಎಂದಿದ್ದಾರೆ. ಟ್ವೀಟ್ ಮೂಲಕ ಕಿಡಿಕಾರಿರುವ ಈಶ್ವರಪ್ಪ, ಚಡ್ಡಿಗೆ ನೀವು ಬೆಂಕಿ ಹಚ್ಜಿ ನೋಡಿ, ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ, RSS ತಂಟೆಗೆ ಬರಬೇಡಿ…ಹುಷಾರ್ ಸಿದ್ದರಾಮಯ್ಯ ಎಂದು ಹೇಳಿದ್ದಾರೆ.
ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ, ಬಳಿಕ ಲಂಕೆಯೇ ಸುಟ್ಟು ಹೋಯಿತು. ಈಗ ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ, ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಪಠ್ಯ ಪರಿಷ್ಕರಣೆಯ ವಿರುದ್ಧ NSUI ಕಾರ್ಯಕರ್ತರು ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮುಂಭಾಗ ಆರೆಸ್ಸೆಸ್ ಚಡ್ಡಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಬಳಿಕ NSUI ಕಾರ್ಯಕರ್ತರಿಗೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಹಲ್ಲೆಕೋರರನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಚೆಡ್ಡಿ ಸುಡುವ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಇದೀಗ ಸಿದ್ದು ಎಚ್ಚರಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.