Home ಕರಾವಳಿ ಗ್ಯಾನ್ ವಾಪಿ ಮಸೀದಿ ವಿರುದ್ಧದ ಷಡ್ಯಂತ್ರವನ್ನು ಸೋಲಿಸಲು ಆಗ್ರಹಿಸಿ ಎಸ್ ಡಿಪಿಐ ಸುಳ್ಯದಲ್ಲಿ ಪ್ರತಿಭಟನೆ

ಗ್ಯಾನ್ ವಾಪಿ ಮಸೀದಿ ವಿರುದ್ಧದ ಷಡ್ಯಂತ್ರವನ್ನು ಸೋಲಿಸಲು ಆಗ್ರಹಿಸಿ ಎಸ್ ಡಿಪಿಐ ಸುಳ್ಯದಲ್ಲಿ ಪ್ರತಿಭಟನೆ

ಸುಳ್ಯ: ಗ್ಯಾನ್ ವಾಪಿ ಮಸೀದಿ ವಿಚಾರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ “ಗ್ಯಾನ್ ವಾಪಿ ಮಸೀದಿ ವಿರುದ್ಧದ ಷಡ್ಯಂತ್ರವನ್ನು ಸೋಲಿಸೋಣ, 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಜಾರಿಗೊಳಿಸೋಣ” ಎಂಬ ಆಗ್ರಹದೊಂದಿಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು ಇದರ ಭಾಗವಾಗಿ ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಗ್ಯಾನ್ ವಾಪಿ ಮಸೀದಿಯ ವುಝು ಕೊಳದಲ್ಲಿದ್ದ ನೀರಿನ ಕಾರಂಜಿ ಆಕೃತಿಯನ್ನು ಶಿವಲಿಂಗ ಪತ್ತೆಯಾಗಿದೆ ಎಂಬ ಸುಳ್ಳು ವರದಿ ನೀಡಿ ಷಡ್ಯಂತ್ರವನ್ನು ರೂಪಿಸಿ ಕೋರ್ಟ್ ಮೂಲಕ ನಿರ್ಬಂಧ ಹೇರಿರುವುದು 1991 ರ ಆರಾಧನಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಎಸ್ ಡಿಪಿಐ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಫೀಕ್ ಎಂ.ಎ ಸ್ವಾಗತಿಸಿ, ಕ್ಷೇತ್ರ ಸಮಿತಿ ಸದಸ್ಯ ಆಶ್ರಫ್ ಟರ್ಲಿ ವಂದಿಸಿದರು.

Join Whatsapp
Exit mobile version