ಮಡಿಕೇರಿ: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಆರಂಭಗೊಂಡಿರುವ ಮಿನಿ ಒಲಿಂಪಿಕ್ ಹಾಕಿ ಕ್ರೀಡೆಯಲ್ಲಿ 14 ವರ್ಷದೊಳಗಿನ ವಿಭಾಗದ ಹಾಕಿ ಕೂರ್ಗ್ ಬಾಲಕ ಮತ್ತು ಬಾಲಕಿಯರ ತಂಡ ಮೊದಲ ಗೆಲುವಿನ ನಗೆ ಬೀರಿದೆ.
ಬಾಲಕರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡವು ಕಲಬುರಗಿ ವಿರುದ್ಧ 20-0 ಗೋಲುಗಳಿಂದ ಗೆದ್ದು ಬೀಗಿತು. ಎಚ್.ಎಂ.ದೀಕ್ಷಿತ್ 7 ಗೋಲು, ಬಿನ್ ಬೋಪಣ್ಣ 6 ಗೋಲು ಸಿಡಿಸಿ ಸಂಭ್ರಮಿಸಿದರು. ಪವನ್ ಪೊನ್ನಣ್ಣ 3, ತನಿಶ್ ತಮ್ಮಯ್ಯ 3, ಜಶನ್ ತಮ್ಮಯ್ಯ 1 ಗೋಲು ಹೊಡೆದು ಸಂಭ್ರಮಿಸಿದರು.
ಹಾಕಿ ಕೂರ್ಗ್ ಬಾಲಕಿಯರ ತಂಡ ದಕ್ಷಿಣ ಕನ್ನಡ ತಂಡವನ್ನು 10-0 ಗೋಲುಗಳಿಂದ ಮಣಿಸಿತು. ಪ್ರಿನ್ಸಿಯಾ 7 ಗೋಲು ಸಿಡಿಸಿದರೆ, ದೇಚಕ್ಕ, ತ್ರಿಶೂಲ್, ಪರ್ಲ್ ಪೊನ್ನಮ್ಮ ತಲಾ ಒಂದು ಗೋಲು ಬಾರಿಸಿದರು. ತರಬೇತುದಾರ ವಿನೋದ್ ಕುಮಾರ್ ಎಚ್.ಎ.ಅರುಣ್, ವ್ಯವಸ್ಥಾಪಕಿ ಕಾವೇರಮ್ಮ ತಂಡದಲ್ಲಿದ್ದಾರೆ.