Home ಟಾಪ್ ಸುದ್ದಿಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ: SDPI ಖಂಡನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ: SDPI ಖಂಡನೆ

0

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಪ್ರತಿ ಲೀಟರ್‌ ಡೀಸೆಲ್‌ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಶೇ. 18.44ರಿಂದ ಶೇ. 21.17ಕ್ಕೆ ಏರಿಕೆ ಮಾಡಿರುವ ಪರಿಣಾಮ ಡೀಸೆಲ್‌ ದರ ಪ್ರತಿ ಲೀಟರ್‌ಗೆ ಎರಡು ರೂ. ಹೆಚ್ಚಳವಾಗಿದೆ. ಇದು ನೇರವಾಗಿ ಸರಕು ಸಾಗಣೆ ವೆಚ್ಚದ ಮೇಲೆ ಪರಿಣಾಮ ಬೀರಲಿದ್ದು, ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಇನ್ನು ಕೇಂದ್ರ ಸರಕಾರ ಕೂಡ ಪೆಟ್ರೋಲ್ ನೊಂದಿಗೆ ಎಲ್ ಪಿ ಜಿ ಮೇಲಿನ ದರವನ್ನು 50 ರೂಪಾಯಿಯಷ್ಟು ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದು, ದೈನಂದಿನ ವೆಚ್ಚವನ್ನೂ ನಿಭಾಯಿಸಲು ಪರದಾಡುವ ದಿನಗಳು ಹತ್ತಿರವೇ ಇದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್  ಇಂಡಿಯಾ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಾ ಮುಂದು ತಾಮುಂದುಗಳ ಜುಗಲ್ ಬಂಧಿಯಿಂದ ಅಗತ್ಯ ವಸ್ತುಗಳ ಮೇಲಿನ ಅನಗತ್ಯ ಬೆಲೆ ಏರಿಕೆ ಹಾಗೂ ತೆರಿಗೆ ಹೆಚ್ಚಳ ಮಾಡಿರುವುದನ್ನು ಎಸ್.ಡಿ.ಪಿಐ ತೀವ್ರವಾಗಿ ಖಂಡಿಸುತ್ತಿದೆ

ಕರ್ನಾಟಕದಲ್ಲಿ ಬಿಜೆಪಿಯು ಬೆಲೆ ಏರಿಕೆ ವಿರುದ್ದ ಜನಾಕ್ರೋಶ ಯಾತ್ರೆ ನಡೆಸುತ್ತಿದೆ. ಅದೇ ಸಂದರ್ಭದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್ ಡಿಸೇಲ್ ಮತ್ತು ಎಲ್ ಪಿ ಜಿ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿಯ ಕಪಟನಾಟಕಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಈಗ ಬಿಜೆಪಿಗರಿಗೆ ತಮ್ಮದೇ ಸರಕಾರದ ವಿರುದ್ದ ಜನಾಕ್ರೋಶ ಯಾತ್ರೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಯುವಜನತೆಗೆ ಸಿಕ್ಕ ಭರವಸೆಗಳ ಉದ್ಯೋಗಗಳು ಕೈಗೆಟುಕದೆ ಪಾಕೆಟ್ ಮನಿಗೂ ತಡವರಿಸುವಾಗ ನಶೆಯ ವ್ಯಾಪಾರಕ್ಕಿಳಿಯುವ ಪ್ರಕರಣಗಳು ಕಾಣುತ್ತಿದೆ, ಸಣ್ಣ ವ್ಯಾಪಾರಗಳು ಮುಚ್ಚುತ್ತಾ ಅಧಿಕಾರ ಹಸ್ತದೊಂದಿಗಿರುವ ವ್ಯಾಪಾರಗಳು ಮಾತ್ರ ಮೇಳೈಸುತ್ತಿದೆ, ಒಟ್ಟಿನಲ್ಲಿ ಇದ್ದವರಿಗಷ್ಟೇ ಮುದ್ದೆಯಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ ಎಂದು ಹೇಳಿದ್ದಾರೆ.

ಜನರೆದುರು ಹಾವು ಮುಂಗುಸಿಯಂತೆ ಕಚ್ಚಾಡುತ್ತಾ ಪಕ್ಷ ಮತ್ತು ವಿಪಕ್ಷಗಳು ಒಳಗೊಳಗೆ ಕೊಡುಕೊಳ್ಳುವಿಕೆಯೊಂದಿಗೆ ರಾಜಿ ಮಾಡುತ್ತಾ ಸಂವಿಧಾನ ತಿಳಿಸಿದ ಜನಸಾಮಾನ್ಯರ ಅವಕಾಶ ಮತ್ತು ಹಕ್ಕುಗಳನ್ನು ಸಾಧ್ಯವಾಗಿಸದ, ಆಳುವವರ ಎದುರು ರಾಜ್ಯಸಭೆ ಮತ್ತು ಲೋಕಸಭೆಯೊಳಗೆ ಧ್ವನಿ ಎತ್ತುವ ಅವಕಾಶವಿಲ್ಲದಿದ್ದರೂ ಎಸ್.ಡಿ.ಪಿ.ಐ ಜನರೊಳಗೊಂದಾಗಿ ಧ್ವನಿ ಎತ್ತುವುದನ್ನು ನಿಲ್ಲಿಸದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version