ಬೆಂಗಳೂರು: ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಸಾಮಾಜಿಕ ಜಾಲತಾಣ ಖಾತೆಯ ನಿರ್ವಹಣೆಗೆ ಖಾಸಗಿ ಕಂಪೆನಿಗಳಿಗೆ ಸರ್ಕಾರಿ ಖಜಾನೆಯಿಂದ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿರುವ ಮಧ್ಯೆ ಸರ್ಕಾರ ವಿದ್ಯಾ ಪ್ರವೇಶ ಮತ್ತು ಕಲಿಕಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಕಲಿಕಾ ಹಾಳೆಗಳ ಜೆರಾಕ್ಸ್ ಪ್ರತಿಗಳನ್ನು ಶಾಲೆಗಳಿಗೆ ವ್ಯವಸ್ಥೆಗೊಳಿಸಲು ತನ್ನಲ್ಲಿ ಹಣವಿಲ್ಲ ಎಂದು ಸಬೂಬು ನೀಡುತ್ತಿದೆ.
ಸಮಗ್ರ ಕರ್ನಾಟಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು 278.23 ಕೋಟಿ ರೂ. ಅನುದಾನವನ್ನು ಹೊಂದಿದ್ದರೂ ರಾಜ್ಯ ಸರ್ಕಾರ ಇದೀಗ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರನ್ನು ಕಲಿಕಾ ಹಾಳೆಗಳನ್ನು ಜೆರಾಕ್ಸ್ ಮಾಡಿಸಲು ಜೋಳಿಗೆ ಕೊಟ್ಟು ಅಕ್ಷರಶಃ ಬೀದಿಗೆ ತಳ್ಳಿದೆ ಎಂದು ತಿಳಿದು ಬಂದಿದೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ತಿದ್ದೋಲೆ ಹೊರಡಿಸಿ ಮತ್ತಷ್ಟೂ ಗೊಂದಲ ನಿರ್ಮಿಸಿರುವ ಸಮಯದಲ್ಲಿ ವಿದ್ಯಾ ಪ್ರವೇಶ ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳನ್ನು ಜೆರಾಕ್ಸ್ ಮಾಡಿಸಲು ದಾನಿಗಳ ಬಳಿ ಹಣ ಸಂಗ್ರಹಣೆಗೆ ಸುತ್ತೋಲೆ ಹೊರಡಿಸಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಈ ಸುತ್ತೋಲೆಯು ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದಾನಿಗಳು, ಸಿಎಸ್ ಆರ್ ಅನುದಾನ ಲಭ್ಯತೆ ಅನ್ವಯ ಮಗುವಾರು ಅಥವಾ ಒಂದು ತರಗತಿಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿಷಯವಾರು ಕಲಿಕಾ ಹಾಳೆಗಳನ್ನು ಜೆರಾಕ್ಸ್ ಮಾಡಿಸಿ ಮಕ್ಕಳಿಂದ ಕಲಿಕಾ ಅಭ್ಯಾಸ ಚಟುವಟಿಕೆಗಳನ್ನು ಜೆರಾಕ್ಸ್ ಮಾಡಿಸಿದ ಅಭ್ಯಾಸ ಹಾಳೆಗಳಲ್ಲಿ ಅಥವಾ ನೋಟ್ ಪುಸ್ತಕಗಳಲ್ಲಿ ಮಾಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಸರ್ಕಾರದ ಬಳಿ ಹಣ ಇಲ್ಲದಿದ್ದರೇ, ಕಾಂಗ್ರೆಸ್ ಪಕ್ಷ ಭಿಕ್ಷೆ ಬೇಡಿ ಮಕ್ಕಳಿಗೆ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.