ನವದೆಹಲಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಶಿವಸೇನೆ ಸಂಸದ ಸಂಜಯ್ ರಾವತ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಸಂಜಯ್ ರಾವತ್ ಅವರ ಪತ್ನಿ, ಪರಿಚಿತರು ಮತ್ತು ಮುಂಬೈ ಚಾಲ್‌ನ ಪುನರಾಭಿವೃದ್ದಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಗೆ ಜೂನ್ 28ರ ಮಂಗಳವಾರದಂದು ಹಾಜರಾಗಬೇಕು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗನುಗುಣವಾಗಿ ಹೇಳಿಕೆ ದಾಖಲಿಸಬೇಕು ಎಂದು ಇಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ರಾವತ್, ನನಗೆ ಇಡಿ ಸಮನ್ಸ್ ನೀಡಿರುವ ವಿಚಾರ ಈಗಷ್ಟೇ ಗೊತ್ತಾಯಿತು. ನನ್ನ ವಿರುದ್ದ ಇದೊಂದು ಪಿತೂರಿಯಾಗಿದೆ. ಆದರೆ ನನ್ನನ್ನು ನೀವು ಶಿರಚ್ಚೇದ ಮಾಡಿದರೂ ನಾನು ಗುವಾಹಟಿ ಮಾರ್ಗ ಹಿಡಿಯುವುದಿಲ್ಲ. ನಾನು ಜಾರಿ ನಿರ್ದೇಶನಾಲಯಕ್ಕೆ ಹೆದರುವುದಿಲ್ಲ, ವಿಚಾರಣೆಗೂ ಹಾಜರಾಗುವುದಿಲ್ಲ. ಬೇಕಾದರೆ ನನ್ನನ್ನು ಬಂಧಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.