Home ಟಾಪ್ ಸುದ್ದಿಗಳು ಬಿಜೆಪಿ ಟೀಕಿಸಿ ಅದೇ ಪಕ್ಷ ಸೇರಲು ಹುದ್ದೆಗೆ ರಾಜೀನಾಮೆ ನೀಡಿದ ಜಮ್ಮು-ಕಾಶ್ಮೀರದ ಐಪಿಎಸ್ ಅಧಿಕಾರಿ

ಬಿಜೆಪಿ ಟೀಕಿಸಿ ಅದೇ ಪಕ್ಷ ಸೇರಲು ಹುದ್ದೆಗೆ ರಾಜೀನಾಮೆ ನೀಡಿದ ಜಮ್ಮು-ಕಾಶ್ಮೀರದ ಐಪಿಎಸ್ ಅಧಿಕಾರಿ

ನವದೆಹಲಿ: ಹಿಂದಿನಿಂದಲೂ ರಾಜಕೀಯದವರನ್ನು ಅಂಟಿಕೊಂಡೇ ಬಂದ ಐಪಿಎಸ್ ಅಧಿಕಾರಿ ಬಸಂತ್ ಕುಮಾರ್ ರಥ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿರುವ ಅವರು ಬೇಗನೆ ರಾಜಕೀಯ ಸೇರುವುದಾಗಿ ಹೇಳಿದ್ದಾರೆ. “ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದೇನೆ” ಎಂದು ಬಸಂತ್ ಕುಮಾರ್ ಜಾಲ ತಾಣಗಳಲ್ಲಿ ಹೇಳಿಕೊಂಡಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ನಾನಾಗಿಯೇ ರಾಜೀನಾಮೆ ನೀಡುತ್ತಿದ್ದೇನೆ, ಇದನ್ನು ದಯವಿಟ್ಟು ಸ್ವೀಕರಿಸಬೇಕಾಗಿ ಕೇಳಿಕೊಳ್ಳುವುದಾಗಿ ಅವರು ಹೇಳಿಕೊಂಡಿದ್ದಾರೆ.
ಜೂನ್ 25ರದು ರಥ್ ಅವರು ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್, ಹೋಮ್ ಗಾರ್ಡ್ಸ್ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ಭದ್ರತೆ ಹಾಗೂ ಎಸ್ ಡಿಆರ್ ಎಫ್- ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥ ಹೇಮಂತ್ ಕುಮಾರ್ ಲೋಹಿಯಾರಿಗೂ ರಾಜೀನಾಮೆ ಪತ್ರದ ಪ್ರತಿಗಳನ್ನು ಕಳುಹಿಸಿದ್ದಾರೆ.


ರಾಜಕೀಯ ಮುಖಂಡರ ಜೊತೆಗೆ ಅಂಟಿಕೊಂಡಿದ್ದ ರಥ್ ಈಗ ನೇರವಾಗಿಯೇ ರಾಜಕೀಯ ಸೇರುವುದಾಗಿ ಹೇಳಿದ್ದಾರೆ. ಲೋಹಿಯಾ ಅವರು “ಜಾಲ ತಾಣಗಳಲ್ಲಿ ನಾನೂ ಈ ರಾಜೀನಾಮೆ ಪತ್ರ ನೋಡಿದೆ. ಆದರೆ ನೇರವಾಗಿ ಪತ್ರ ಬಂದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. “ನಾನು ಯಾವುದಾದರೂ ರಾಜಕೀಯ ಪಕ್ಷ ಸೇರಿದರೆ ಅದು ಬಿಜೆಪಿ. ನಾನು ಚುನಾವಣೆಗೆ ಸ್ಪರ್ಧಿಸಿದರೆ ಅದು ಕಾಶ್ಮೀರದಲ್ಲಿ. ನಾನು ರಾಜಕೀಯಕ್ಕೆ ಸೇರಿದ್ದೇ ಆದರೆ ಅದು 2024ರ ಮಾರ್ಚ್ 6ರ ಒಳಗೆ” ಎಂದೂ ರಥ್ ಹೇಳಿಕೊಂಡಿದ್ದಾರೆ.
ವಿಚಿತ್ರವೆಂದರೆ 2000 ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಬಸಂತ್ ಕುಮಾರ್ ರಥ್ ಹಿಂದೆಲ್ಲ ಟ್ವಿಟರ್ ಮತ್ತು ಜಾಲ ತಾಣಗಳಲ್ಲಿ ಬಿಜೆಪಿಯ ಕೋಮು ರಾಜಕೀಯವನ್ನು ಖಂಡಿಸಿದ್ದಾರೆ.


2020ರ ಜುಲೈಯಲ್ಲಿ ಕೇಂದ್ರ ಗೃಹ ಸಚಿವಾಲಯವು ‘ತುಂಬ ತಪ್ಪು ನಡವಳಿಕೆ, ತಪ್ಪು ಮಾಹಿತಿದಾರ’ ಎಂದು ರಥ್ ರನ್ನು ಅಮಾನತು ಮಾಡಿ ತನಿಖೆಗೆ ಆದೇಶ ನೀಡಿತ್ತು. ಸರಕಾರದ ಇಲಾಖೆಗಳಿಗೂ ಮಾಹಿತಿ ನೀಡಲಾಗಿತ್ತು. ‘ಡಿಜಿಪಿಯವರ ಅನುಮತಿಯಿಲ್ಲದೆ ಕೇಂದ್ರ ಸ್ಥಳ ಬಿಟ್ಟು ಹೋಗಬಾರದು’ ಎಂದೂ ರಥ್ ರಿಗೆ ನಿಬಂಧನೆ ವಿಧಿಸಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಯುವಕರಲ್ಲಿ ಜನಪ್ರಿಯರಾಗಿರುವ ರಥ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯದ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ಇದರಿಂದಾಗಿ ಅಧಿಕಾರಿಗಳ ವಲಯದಲ್ಲಿ ಅಪ್ರಿಯರೆನಿಸಿದ್ದರು. ಅವರ ಕಾಶ್ಮೀರ ಕೇಂದ್ರಿತ ಅಭಿಪ್ರಾಯ ಮತ್ತು ಕವನಗಳ ಪುಸ್ತಕ ಸಹ ಅಧಿಕಾರಿಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಹಿಡಿಸಿರಲಿಲ್ಲ. 1990ರ ಗವ್ಕಾದಾಲ್ ದುರ್ಘಟನೆಯಲ್ಲಿ ಪ್ಯಾರಾ ಮಿಲಿಟರಿಯವರ ಗುಂಡೇಟಿಗೆ 50 ಜನರು ಸಾವಿಗೀಡಾದ ಘಟನೆಯ ಇವರ ಕವನವು ಜನರನ್ನು ಸೆಳೆದರೆ, ಅಧಿಕಾರಿಗಳನ್ನು ಕೆರಳಿಸಿತ್ತು.


2020ರ ಜುಲೈಯಲ್ಲಿ ಡಿಜಿಪಿ ದಿಲ್ಬಾಗ್ ಸಿಂಗ್ ಜೊತೆ ರಥ್ ಕೈ ಮಿಲಾಯಿಸಿದ್ದರು. ಡಿಜಿಪಿ ಸಿಂಗ್ ವಿರುದ್ಧ ಜಮ್ಮು ಪೊಲೀಸ್ ಠಾಣೆಯಲ್ಲಿ ರಥ್ ನೀಡಿದ ದೂರಿನಲ್ಲಿ ಜೀವಕ್ಕೆ ಬೆದರಿಕೆ ಇದೆ, ಸ್ವಾತಂತ್ರ್ಯ ಮತ್ತು ಜೀವಕ್ಕೂ ಅಪಾಯವಿದೆ ಎಂದು ದೂರು ನೀಡಿದ್ದರು.
ಜಮ್ಮು ಕಾಶ್ಮೀರದ ಪೊಲೀಸ್ ಇಲಾಖೆಯಲ್ಲಿ ಹಲವು ಹುದ್ದೆ ನಿರ್ವಹಿಸಿದ 50ರ ಹರೆಯದ ರಥ್ ಅವರು ಟ್ರಾಫಿಕ್ ಐಜಿಪಿಯಾಗಿದ್ದಾಗ ಅವರಿಗೆ ಹೂ ಬುಕೆಗಳೂ ಸಿಕ್ಕಿದ್ದವೂ, ಕಲ್ಲಿನೇಟೂ ದೊರೆತವು. ಬಹಳ ಶಿಸ್ತುಬದ್ಧ ಕಾರ್ಯದಲ್ಲಿ ಅವರು ದೊಡ್ಡವರನ್ನೂ ಬಿಟ್ಟಿರಲಿಲ್ಲ. ದೊಡ್ಡಸ್ತಿಕೆ ತೋರಿಸಿದವರಿಗೆ ಕಪಾಳಕ್ಕೆ ಬಿಗಿದು, ಅವರ ಮೊಬೈಲ್ ಫೋನ್ ಒಡೆದು ವೈರ ಕಟ್ಟಿಕೊಂಡದ್ದೂ ಇದೆ. ಆದರೆ ಅವರ ಟ್ರಾಫಿಕ್ ನಲ್ಲಿ ಎಲ್ಲರಿಗೂ ಒಂದೇ ರೀತಿ ಜನಸಾಮಾನ್ಯರಿಗೆ ಹಿಡಿಸಿತ್ತು.


“ನನ್ನ ಪ್ರೀತಿಯ ಹಿರಿಯ ಅಧಿಕಾರಿಗಳು ನನ್ನ ಧೈರ್ಯ ಏನಿದ್ದರೂ ಫೇಸ್ ಬುಕ್, ಟ್ವಿಟರ್ ಜಾಲ ತಾಣಗಳಲ್ಲಿ ಮಾತ್ರ ಎಂದು ತಿಳಿದಿದ್ದಾರೆ. ನಿಮ್ಮ ಪಿಎಸ್ ಒಗಳಿಗೆ ಹೆಲ್ಮೆಟ್ ಧರಿಸದೆ ನಾನಿರುವಲ್ಲಿ ಬೈಕ್ ನಲ್ಲಿ ಬರಲು ಹೇಳಿ” ಎಂದು ಟ್ರಾಫಿಕ್ ಐಜಿಪಿ ಆಗಿದ್ದಾಗ ಅವರು ಪೋಸ್ಟ್ ಮಾಡಿದ್ದರು. ಒಡಿಶಾ ಮೂಲದ ರಥ್ ಅವರು ಐಪಿಎಸ್ ಆಗುವುದಕ್ಕೆ ಮೊದಲು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಸೋಶಿಯಾಲಜಿಯಲ್ಲಿ ಎಂಎ ಮಾಡಿದ್ದಾರೆ. 2018ರಲ್ಲಿ ಅವರು ಐಜಿಪಿಗೆ ಬಡ್ತಿ ಪಡೆದಿದ್ದರು.

Join Whatsapp
Exit mobile version