Home ಟಾಪ್ ಸುದ್ದಿಗಳು ಮುಸ್ಲಿಮರ ಅಸ್ಮಿತೆಯ ನಾಶಕ್ಕೆ ಹೊರಟಿರುವ ಸಂಘಪರಿವಾರ: ಅಸದುದ್ದೀನ್ ಉವೈಸಿ

ಮುಸ್ಲಿಮರ ಅಸ್ಮಿತೆಯ ನಾಶಕ್ಕೆ ಹೊರಟಿರುವ ಸಂಘಪರಿವಾರ: ಅಸದುದ್ದೀನ್ ಉವೈಸಿ

ಹೈದರಾಬಾದ್: ಬಿಜೆಪಿ ಮತ್ತು ನರೇಂದ್ರ ಮೋದಿ ಸರಕಾರದಿಂದ ಹಲಾಲ್ ಮಾಂಸ, ಮುಸ್ಲಿಮರ ಟೊಪ್ಪಿ, ಅವರ ಗಡ್ಡಕ್ಕೆ ಅಪಾಯವಿದೆ. ಇದೀಗ ಮುಸ್ಲಿಮರ ಆಹಾರ ಸಂಸ್ಕೃತಿಯ ಮೇಲೆ ಬಿಜೆಪಿಯವರ ಕಣ್ಣು ಬಿದ್ದಿದೆ. ಆ ಪಕ್ಷ ಮುಸ್ಲಿಮರ ಅಸ್ಮಿತೆಯ ನಾಶಕ್ಕೆ ಹೊರಟಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

 ಹೈದರಾಬಾದಿನಲ್ಲಿ ಮಾತನಾಡಿದ ಅವರು,ಬಿಜೆಪಿಯವರ ಉದ್ದೇಶವೇ ಭಾರತದ ವೈವಿಧ್ಯತೆಯನ್ನು ನಾಶ ಮಾಡುವುದು ಮತ್ತು ಮುಸ್ಲಿಮರ ಗುರುತನ್ನು ಅಳಿಸುವುದಾಗಿದೆ. “ಅವರು ಯೋಚಿಸುತ್ತಾರೆ ಹಲಾಲ್ ಮಾಂಸದಿಂದ, ಮುಸ್ಲಿಮರ ತಲೆ ಟೊಪ್ಪಿಗೆಯಿಂದ, ಗಡ್ಡದಿಂದ ತೊಂದರೆ ಎಂದು. ಈಗ ಆಹಾರ ಸಂಸ್ಕೃತಿ ಹಿಡಿಸುತ್ತಿಲ್ಲ. ಅಲ್ಪಸಂಖ್ಯಾತರನ್ನು ಮುಗಿಸುವುದೇ ಬಿಜೆಪಿ ಗುರಿ” ಎಂದು ಅಸದುದ್ದೀನ್ ನೇರ ಆರೋಪ ಮಾಡಿದರು.

ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಪ್ರಧಾನಿಯವರ ಮಾತು ಬರೇ ಮಾತಿನ ವರಸೆ ಮಾತ್ರ. ಅವರ ಮುಖ್ಯ ಕೆಲಸ ದೇಶದ ಬಹುತ್ವ, ವೈವಿಧ್ಯವನ್ನು ನಾಶ ಪಡಿಸುವುದಾಗಿದೆ ಎಂದು ಅವರು ಹೇಳಿದರು. 

ಕಳೆದ ತಿಂಗಳು ಉತ್ತರ ಪ್ರದೇಶ ಸರಕಾರವು ಇಸ್ಲಾಮಿಕ್ ಶಾಲಾ ಕಾಲೇಜುಗಳು ಮತ್ತು ಮದರಸಾಗಳ ಸಮೀಕ್ಷೆ ನಡೆಸುವಂತೆ ಆದೇಶ ನೀಡಿತು. ಅಸದುದ್ದೀನ್ ಉವೈಸಿ ಅದರ ಮರ್ಮ ಕಂಡುಕೊಂಡರು. ಬಿಜೆಪಿಯವರು ಈಗ ವಕ್ಫ್ ಆಸ್ತಿಗಳ ಮೇಲೆ ಕಣ್ಣು ಹಾಕಿದ್ದಾರೆ ಎಂದು ಟೀಕಿಸಿದರು.

“ಮದ್ರಸಾಗಳ ಸಮೀಕ್ಷೆಯ ಹಿಂದೆ ಬಹು ದೊಡ್ಡ ಸಂಚು ಇದೆ. ನೀವು ಉತ್ತರ ಪ್ರದೇಶದ ಸರಕಾರದವರು ವಕ್ಫ್ ಆಸ್ತಿಗಳ ಸಮೀಕ್ಷೆ ನಡೆಸುತ್ತಿದ್ದೀರಿ? ಹಿಂದೂ ಎಂಡೋಮೆಂಟ್ ಬೋರ್ಡುಗಳ ಆಸ್ತಿಗಳ ಸಮೀಕ್ಷೆಯನ್ನೂ ನಡೆಸುವಿರಾ? ಮದ್ರಸಾಗಳ ಸರ್ವೆಯ ಹಿಂದೆ ಬಿಜೆಪಿಯವರ ದೊಡ್ಡ ಸಂಚು ಇದೆ. ಆಸ್ತಿ ಹಕ್ಕಿನ ಸಂವಿಧಾನದ 300ನೇ ವಿಧಿಯನ್ನು ಬಿಜೆಪಿ ಮುರಿದಿದೆ” ಎಂದು ಅಸದುದ್ದೀನ್ ಟೀಕಿಸಿದರು.

“ಯಾರಾದರೂ ಸರಕಾರೀ ಭೂಮಿಯನ್ನು ವಕ್ಫ್ ಆಸ್ತಿಯೆಂದು ಮಾಡಿಕೊಂಡಿದ್ದರೆ ಅದರ ವಿರುದ್ಧ ಕೋರ್ಟಿನಲ್ಲಿ ಹೋರಾಡಿ, ನ್ಯಾಯ ಮಂಡಳಿಗಳಿಗೆ ಹೋಗಿ. ಬಿಜೆಪಿಯ ಇಂತಹ ಒಳ ಗುರಿಯ ಸರ್ವೆಗಳು ಪೂರ್ಣ ತಪ್ಪು. ಒಂದೇ ಸಮನೆ ಮುಸ್ಲಿಮರನ್ನು ಗುರಿಯಿಟ್ಟು ನಡೆದಿರುವ ಇದನ್ನು ನಾವು ತೀವ್ರವಾಗಿ ಖಂಡಿಸುವುದಾಗಿ” ಅಸದುದ್ದೀನ್ ಹೇಳಿದರು.

ಮುಖ್ಯವಾಗಿ ನಮ್ಮ ಪಕ್ಷವನ್ನು ಉತ್ತರ ಪ್ರದೇಶದಲ್ಲಿ ಬಲಿಷ್ಠಗೊಳಿಸಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಎಐಎಂಐಎಂ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಶೌಕತ್ ಆಲಿಯವರು ಇದೇ ಸಂದರ್ಭದಲ್ಲಿ ಹೇಳಿದರು.

ಮುಂದಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ಬಹಳಷ್ಟು ನಾಯಕರು  ಎಐಎಂಐಎಂ ಸೇರುವರು. ಮುಸ್ಲಿಮರು ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಯಾವಾಗಲೂ ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿದ್ದಾರೆ ಎಂದೂ ಅವರು ತಿಳಿಸಿದರು.

“ಜನರು ಎಐಎಂಐಎಂನತ್ತ ಬರುತ್ತಿದ್ದಾರೆ. ನಾವು ಪೂರ್ವ ಉತ್ತರ ಪ್ರದೇಶ, ಪೂರ್ವಾಂಚಲ, ಮಧ್ಯ ಉತ್ತರ ಪ್ರದೇಶ, ಬುಂದೇಲಖಂಡ ಮತ್ತಿತರ ಕಡೆ ಸ್ಪರ್ಧಿಸುತ್ತಿದ್ದೇವೆ. 2017ರ ಚುನಾವಣೆಯಲ್ಲಿ ಬಿಜೆಪಿಯು ಮತ ಧ್ರುವೀಕರಣದ ಲಾಭ ಪಡೆದಿದೆ. ಸಮಾಜವಾದಿ ಪಕ್ಷವು ಮುಸ್ಲಿಮರನ್ನು ಸೋಲಿಸುತ್ತದೆ ಎಂದು ಆಗ ಮುಸ್ಲಿಮರು ನಂಬಿದ್ದರು. ಸ್ವಾತಂತ್ರ್ಯ ದೊರೆತಾಗಿನಿಂದಲೂ ಮುಸ್ಲಿಮರು ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿದ್ದಾರೆ” ಎಂದು  ಶೌಕತ್ ಆಲಿ  ಹೇಳಿದರು.

ನಮ್ಮ ನಾಯಕ ಅಸದುದ್ದೀನ್ ಉವೈಸಿಯವರು ಹಿಂದೂ – ಮುಸ್ಲಿಂ ಎರಡೂ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಮತ್ತು ತಮ್ಮ ಜನಾಂಗದ ಒಳಿತಿಗಾಗಿ ಅಗತ್ಯದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

“ಹಿಂದೂಗಳು ಮುಸ್ಲಿಮರಿಗೆ ಸಮಸ್ಯೆಯಲ್ಲ. ಮುಸ್ಲಿಂ ಪ್ರದೇಶಗಳಲ್ಲಿ ಎಟಿಎಂಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಅದು ರಾಷ್ಟ್ರೀಯ ಸುದ್ದಿಯಾಯಿತು ಹಾಗೂ ಅದು ಹಿಂದೂ ಮುಸ್ಲಿಂ ಸಮಸ್ಯೆಯೂ ಆಯಿತು. ಮುಸ್ಲಿಮರೇ ಬಹುತೇಕರಿರುವ ಪ್ರದೇಶದಲ್ಲಿ ಉತ್ತರ ಪ್ರದೇಶದ ಎಲ್ಲಾದರೂ ಬ್ಯಾಂಕುಗಳು ಇವೆಯೇ? ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ, ಮುಸ್ಲಿಂ ಪ್ರದೇಶಗಳಲ್ಲಿ ಮದ್ದುಗಳು ಸಿಗುವುದಿಲ್ಲ. ನಾವು ಇವೆಲ್ಲದಕ್ಕೂ ಹೋರಾಡಬೇಕಾಗಿದೆ” ಎಂದು ಆಲಿ ಹೇಳಿದರು.

Join Whatsapp
Exit mobile version