Home ಟಾಪ್ ಸುದ್ದಿಗಳು ನಮ್ಮ ಸರಕಾರ ಬೀಳಿಸಲು ಬಿಜೆಪಿ, ಸಿಪಿಎಂ ಷಡ್ಯಂತ್ರ: ಮಮತಾ ಬ್ಯಾನರ್ಜಿ

ನಮ್ಮ ಸರಕಾರ ಬೀಳಿಸಲು ಬಿಜೆಪಿ, ಸಿಪಿಎಂ ಷಡ್ಯಂತ್ರ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಬಿಜೆಪಿಯ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಅವರು ಸಿಲಿಗುರಿಯ ಶಾಸಕ ಶಂಕರ್ ಘೋಷ್ ಜೊತೆಗೆ ಸಿಲಿಗುರಿಯ ಮಾಜಿ ಮೇಯರ್ ಅಶೋಕ್ ಭಟ್ಟಾಚಾರ್ಯರನ್ನು ಭೇಟಿ ಮಾಡಿ ಆ ಫೋಟೋ ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಪಶ್ಚಿಮ ಬಂಗಾಳದ ನನ್ನ ಸರಕಾರವನ್ನು ಅಭದ್ರಗೊಳಿಸಲು ಬಿಜೆಪಿ ಮತ್ತು ಸಿಪಿಎಂ ಸಂಚು ನಡೆಸಿವೆ” ಎಂದು ದೂರಿದ್ದಾರೆ.

ಇಬ್ಬರು ಬಿಜೆಪಿ ಜನಪ್ರತಿನಿಧಿಗಳು ಒಬ್ಬರು ಸಿಪಿಎಂ ನಾಯಕರನ್ನು ಭೇಟಿ ಮಾಡಿದ್ದು ತೃಣಮೂಲ ಕಾಂಗ್ರೆಸ್ಸಿಗರ ಹುಬ್ಬೇರುವಂತೆ ಮಾಡಿದೆ. ಬಿಜೆಪಿ ಮತ್ತು ಸಿಪಿಎಂ ಇದನ್ನು ಸೌಜನ್ಯದ ಭೇಟಿ ಎಂದಿದೆ. ಆದರೆ ಇದು ಟಿಎಂಸಿ ಸರಕಾರವನ್ನು ಅಭದ್ರಗೊಳಿಸಲು ನಡೆದಿರುವ ಸಂಚು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಿಜೆಪಿಯ ಹಾಲಿ ಸಂಸದ ಮತ್ತು ಶಾಸಕರು ಸಿಪಿಎಂ ನಾಯಕರನ್ನು ಅವರ ಮನೆಗೇ ಹೋಗಿ ಭೇಟಿಯಾದರು. ತಕ್ಷಣ ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದು ವಿವಾದವಾಗುತ್ತಲೇ ಟ್ವೀಟ್ ಮಾಡಿದ ಸಂಸದ ರಾಜು ಬಿಸ್ತಾರು ನಾನು ಶಾಸಕರನ್ನು ಕರೆದುಕೊಂಡು ಹೋಗಿ ಮಾಜಿ ಮೆಯರ್ ಭಟ್ಟಾಚಾರ್ಯರಿಗೆ ದೀಪಾವಳಿಯ ಶುಭಾಶಯ ಹೇಳಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಏಳು ಬಾಂಗ್ಲಾ, ನಿಮ್ಮ ಸರಕಾರವನ್ನು ಇದೇ ಡಿಸೆಂಬರ್ ಒಳಗೆ ಅಭದ್ರಗೊಳಿಸಲು ಷಡ್ಯಂತ್ರ ನಡೆದಿದೆ ಎಂದು ಜಾಲತಾಣಗಳಲ್ಲಿ ಹಲವರು ಟ್ವೀಟ್ ಮಾಡಿದ್ದಾರೆ.

“ಇದು ಬರೇ ಸೌಜನ್ಯದ ಭೇಟಿಯಲ್ಲ, ಟಿಎಂಸಿ ಸರಕಾರವನ್ನು ಅಭದ್ರಗೊಳಿಸಲು ನಡೆಸಿದ ತಾಲೀಮು. ಬಿಜೆಪಿಯು ರಾಜ್ಯ ಚುನಾವಣೆಯಲ್ಲಿ ಸೋತ ಬಳಿಕ ಹಿಂಸೆ ಹೆಚ್ಚಿಸಲು, ರಾಷ್ಟ್ರಪತಿ ಆಡಳಿತ ಹೇರಲು, ಡಾರ್ಜಿಲಿಂಗ್ ಪ್ರದೇಶ ಒಡೆದು ಕೇಂದ್ರಾಡಳಿತ ಪ್ರದೇಶ ಮಾಡಲು ಇತ್ಯಾದಿ ಸಂಚು ನಡೆಸಿದೆ. ನಾವು ಇವೆಲ್ಲ ಕೀಳು ರಾಜಕೀಯವನ್ನೂ ಖಂಡಿಸುತ್ತೇವೆ” ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುಣಾಲ್ ಘೋಷ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ಭಾಗ ಒಡೆದು ಪ್ರತ್ಯೇಕ ರಾಜ್ಯ ಮಾಡುವ ಇಲ್ಲವೇ ಕೇಂದ್ರಾಡಳಿತ ಪ್ರದೇಶ ಮಾಡುವ ಬಗ್ಗೆ ಬಿಜೆಪಿ ನಾಯಕರು ಹಲವರು ಈಗಾಗಲೇ ಹೇಳಿಕೆ ನೀಡಿಯಾಗಿದೆ. 

ಪ್ರತಿಪಕ್ಷದ ನಾಯಕ ಸುವೇಂಧು ಅಧಿಕಾರಿ ಅವರು ಟಿಎಂಸಿ ಸರಕಾರ ಪೂರ್ಣಾವಧಿ ಮುಗಿಸುವುದಿಲ್ಲ. ಅದರ ಅಧಿಕಾರಾವಧಿ ಬೆರಳೆಣಿಕೆಯಷ್ಟು ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಈಗ ಟಿಎಂಸಿ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

“ಈ ಭೇಟಿಯಲ್ಲಿ ರಾಜಕೀಯವೇನೂ ಇಲ್ಲ. ಕಳೆದ ತಿಂಗಳು ನನ್ನ ಮಡದಿಯ ಸಾವಿನ ಕಾರ್ಯದಲ್ಲಿ ಸಂಸದರಿಗೆ ಬರಲು ಆಗಿರಲಿಲ್ಲ. ದೀಪಾವಳಿ ಸಮಯದಲ್ಲಿ ಸ್ಥಳೀಯ ಶಾಸಕರೊಡನೆ ಬಂದು ಭೇಟಿಯಾಗಿದ್ದಾರೆ. ದೀಪಾವಳಿ ಕಾಲವಾದುದರಿಂದ ಅವರು ಬರುವಾಗ ಸ್ವಲ್ಪ ಒಣ ಹಣ್ಣು ತಂದಿದ್ದರು” ಎಂದು ಸಿಪಿಎಂ ನಾಯಕ ಭಟ್ಟಾಚಾರ್ಯ ಹೇಳಿದ್ದಾರೆ.

Join Whatsapp
Exit mobile version