Home ಟಾಪ್ ಸುದ್ದಿಗಳು ಯಾವುದೇ ವಿಧದ ತನಿಖೆಗೆ ಸಿದ್ಧ: ವೀರೇಂದ್ರ ಹೆಗ್ಗಡೆ

ಯಾವುದೇ ವಿಧದ ತನಿಖೆಗೆ ಸಿದ್ಧ: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ವಿವಾದ ಉಂಟಾಗಿರುವ ವಿವಾದದ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತೊಮ್ಮೆ ಮಾತಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ಅವಹೇಳನ ಕೂಡದು ಎಂದು ನಡೆದ ಧರ್ಮಸಂರಕ್ಷಣಾ ರಥಯಾತ್ರೆಯು ಕೊಲ್ಲೂರಿನಿಂದ ಆರಂಭವಾಗಿ ಧರ್ಮಸ್ಥಳದಲ್ಲಿ ಮುಕ್ತಾಯಗೊಂಡಿದೆ. ಸಾವಿರಾರು ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಧರ್ಮಸ್ಥಳದ ಮುಂಭಾಗ ಅಳವಡಿಸಿದ ವೇದಿಕೆಯಲ್ಲಿ ಅನೇಕ ಸ್ವಾಮೀಜಿಗಳು ಸೇರಿದಂತೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.

ಹೆಗ್ಗಡೆಯರುವರು ಸೇರಿರುವ ಭಕ್ತರನ್ನು ಧರ್ಮ ಸೈನಿಕರೆಂದು ಉಲ್ಲೆಖಿಸಿ, ಯಾವುದೇ ರೀತಿಯ ತನಿಖೆಯಾಗಲಿ ನಾವೂ ಸಿದ್ಧರಿದ್ದೇವೆ.‌ ಆದರೆ ನಮ್ಮ ವಿರುದ್ಧ ಯಾವುದೇ ದಾಖಲೆಯಿಲ್ಲದೆ ಆರೋಪ ಮಾಡುತ್ತಿದ್ದಾರೆ. ನಿಮ್ಮ ದೀಕ್ಷೆಯಿಂದ ಈ ಎಲ್ಲಾ ಕಷ್ಟಗಳೂ ದೂರವಾಗಲಿ. ಧರ್ಮಸ್ಥಳಕ್ಕೆ ಆಪತ್ತು ಬಂದಾಗ ನೀವು ಕೈಗೊಂಡ ಈ ಪ್ರಾರ್ಥನೆಯನ್ನು ಸ್ವಾಮಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದರೆ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಚಂದ್ರನಾಥ ಸ್ವಾಮಿ ಕಾರಣ. ಆದರೆ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿದೆ, ನೀವೇ ಶಿಷ್ಟ ರಕ್ಷಣೆಯನ್ನು ಮಾಡಬೇಕು. ಕ್ಷೇತ್ರದ ಕಾರ್ಯವನ್ನು ಜನತೆ ಮೆಚ್ಚಿದ ಕಾರಣಕ್ಕೆ ಇಂದು ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದೀರಿ. ನಮ್ಮ ವಾಹನವನ್ನು ಅಪೇಕ್ಷಿಸದೆ ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ನೀಡಿದ್ದೀರಿ ಎಂದು ಡಾ. ಹೆಗ್ಗಡೆ ಹೇಳಿದರು.

ದೇಶವನ್ನ ಹಾಳು ಮಾಡಬೇಕಾದಲ್ಲಿ ಮೊದಲು ಸಂಸ್ಕೃತಿಯನ್ನು ನಾಶ ಮಾಡುತ್ತಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೇ ಕ್ಷೇತ್ರಗಳಿಗೂ ಬರಬಹುದು. ಆದರೆ ವಿಷವನ್ನು ಕುಡಿಯುವ ಶಕ್ತಿ ಎಲ್ಲರಿಗೂ ಬರುವುದಿಲ್ಲ. ಈಗ ಮಳೆ ಬರುತ್ತಿದ್ದರೂ ಆದರೆ ಯಾರೂ ಕದಲುತ್ತಿಲ್ಲ. ವೈಯುಕ್ತಿಕ ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಎಲ್ಲರೂ ಸ್ವಾಸ್ತ್ಯ ಸಂಕಲ್ಪವನ್ನು ಮಾಡಬೇಕು ಎಂದು ಡಾ. ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

Join Whatsapp
Exit mobile version