ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಮಂತ್ರಿಗಳ ಮಕ್ಕಳಿಗೇ ಅಧಿಕಾರ ಕೊಡಲಾಗುತ್ತಿದೆ. ಹೀಗೆ ಕೊಟ್ಟರೆ ನಾವು ಏನು ಮಾಡಬೇಕು? ಜನಸಾಮಾನ್ಯರ ಮಕ್ಕಳಿಗೂ ಅಧಿಕಾರ ದೊರೆಯಬೇಕು’ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಅವರು ಮಾತಾಡಿದರು.
ಜನರ ಆಶೀರ್ವಾದ ಪಡೆದು ಮೂರು ಬಾರಿ ಶಾಸಕನಾಗಿ ಆಯ್ಕೆಯಾದ ನಮ್ಮಂತಹ ಸಾಮಾನ್ಯರ ಮಕ್ಕಳಿಗೂ ಅಧಿಕಾರ ಸಿಗಬೇಕು. ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಹಿಂದಿನಿಂದಲು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಮಂತ್ರಿಗಳ ಮಕ್ಕಳಿಗೇ ಅಧಿಕಾರ ನೀಡಲಾಗಿದೆ. ಹಾಗಾದರೆ, ನನಗೆ ಅರ್ಹತೆ ಇಲ್ಲವೆ? ಎಂದು ಪ್ರಶ್ನಿಸಿದರು.
ಶಾಸಕ ಸ್ಥಾನ ಸಮಾಧಾನ ನೀಡಿದರೂ ಲೋಕಸಭಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಯೋಗ್ಯತೆಯೂ ನನಗಿದೆ. ಅದೇ ಕಾರಣಕ್ಕೆ ನನಗೂ ಸಂಸದ ಸ್ಥಾನಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇನೆ. ಹಾಗಂತ ವಿರುದ್ಧ ಯಾವುದೇ ಅಸಮಧಾನ ಇಲ್ಲ. ರಾಜಕೀಯ ಕ್ಷೇತ್ರದಲ್ಲಿ ಹತ್ತು ವರ್ಷ ಅನುಭವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಗೆದ್ದು ಬಂದಿದ್ದೇನೆ ಎಂದು ಶಾಸಕ ಗೋಪಾಲ ಕೃಷ್ಣ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೂ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ. ಆದರೆ ಅವರಿಗೆ ಗೊತ್ತಿರಲಿ, ಸರಕಾರ ಬೀಳಿಸುವ ತಾಕತ್ತು, ಶಕ್ತಿ ಅವರಿಗಿಲ್ಲ ಎಂದ ಶಾಸಕರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ವಿಜಯೇಂದ್ರ ಬಂಡವಾಳ ಹೂಡಿದ್ದರು ಎಂದು ಆರೋಪಿಸಿದರು.