Home ಟಾಪ್ ಸುದ್ದಿಗಳು ಮಂದಿರ, ಪ್ರತಿಮೆಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ: ರೈತ ಮುಖಂಡ ಬಾಬಾಗೌಡ ಪಾಟೀಲ

ಮಂದಿರ, ಪ್ರತಿಮೆಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ: ರೈತ ಮುಖಂಡ ಬಾಬಾಗೌಡ ಪಾಟೀಲ

ಹಾವೇರಿ: ‘ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಪ್ರತಿಮೆ, ರಾಮಮಂದಿರ, ಬುಲೆಟ್‌ ಟ್ರೈನ್‌ಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ. ಭಾವಾನಾತ್ಮಕ ವಿಚಾರಗಳನ್ನು ಹೇಳಿ ಸಮಸ್ಯೆಗಳನ್ನು ಮರೆಮಾಚುವ ಹುನ್ನಾರವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಟೀಕಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’10 ಕೋಟಿ ಯುವಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳು ಖಾಸಗೀಕರಣದಿಂದ ಬಂಡವಾಳಶಾಹಿಗಳ ಪಾಲಾಗುತ್ತಿವೆ. ಪೆಟ್ರೋಲ್‌, ಇಂಧನ ದರ ಏರಿಕೆಯಿಂದ ಪ್ರತಿಯೊಂದು ಸಾಮಗ್ರಿಗಳ ಬೆಲೆ ತುಟ್ಟಿಯಾಗುತ್ತಿದೆ. ಕೂಲಿ ಕಾರ್ಮಿಕರು, ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆತ್ಮನಿರ್ಭರ ಎಂಬುದು ಬರೀ ಹೆಸರಿಗಷ್ಟೇ ಇದೆ. ಯಾವ ಕ್ಷೇತ್ರದಲ್ಲೂ ದೇಶ ಸ್ವಾವಲಂಬನೆ ಸಾಧಿಸಿಲ್ಲ. ಆಟದ ಬೊಂಬೆಯಿಂದ ಕೃಷಿ ಯಂತ್ರೋಪಕರಣಗಳವರೆಗೆ ಎಲ್ಲವನ್ನೂ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಶೇ 66ರಷ್ಟು ಅಡುಗೆ ಎಣ್ಣೆ ಕೂಡ ವಿದೇಶದಿಂದ ಆಮದಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಸರ್ವಾಧಿಕಾರಿ’ಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸರ್ಕಾರದ ನಡೆಯನ್ನು ಪ್ರಶ್ನಿಸಿದರೆ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಸಾಕ್ಷ್ಯಗಳಿಲ್ಲದೆ ದಿಶಾ ರವಿಯನ್ನು ಬಂಧಿಸಿ, ದೇಶದ್ರೋಹದ ಪಟ್ಟ ಕಟ್ಟಲು ಯತ್ನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾಯ್ದೆಗಳು ರೈತರ ಪರ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮೊದಲಿಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಾಯ್ದೆ ಅನುಷ್ಠಾನಕ್ಕೆ ತರಲಿ. ಆ ಕಾಯ್ದೆಗಳಿಂದ ಯಾವುದೇ ತೊಂದರೆ ಇಲ್ಲ ಎಂಬುದು ರೈತರಿಗೆ ಖಚಿತವಾದ ಮೇಲೆ ದೇಶದಾದ್ಯಂತ ಜಾರಿಗೊಳಿಸಲಿ. ಈ ಕರಾಳ ಕಾಯ್ದೆಗಳ ವಿರುದ್ಧ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಲು ಚಳವಳಿ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಬಂದ 17 ಶಾಸಕರನ್ನು ಸೇರಿಸಿಕೊಂಡು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ರಾಜ್ಯದಲ್ಲಿ ‘ಸಮ್ಮಿಶ್ರ ಸರ್ಕಾರ’ ನಡೆಸುತ್ತಿದ್ದಾರೆ. ಇದು ಅಮಿತ್‌ಶಾ ಅವರ ಚಾಣಕ್ಯ ನೀತಿ ಎಂದು ವ್ಯಂಗ್ಯವಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಿದ್ದನಗೌಡ ಪಾಟೀಲ, ಬಸವರಾಜ ರಾಚರೆಡ್ಡಿ, ಸಿದ್ರಾಮಪ್ಪ ರಂಜಣಗಿ, ಕೆ.ಎಸ್‌. ಸುಧೀರ್‌ಕುಮಾರ್‌, ಸೋಮಗುದ್ದು ರಂಗಸ್ವಾಮಿ, ಮಹೇಶ ಕೊಟ್ಟೂರು ಇದ್ದರು.

Join Whatsapp
Exit mobile version