Home ಜಾಲತಾಣದಿಂದ ನಟಿ ಕಂಗಾನಾ ರಾಣಾವತ್ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿದ ನ್ಯಾಯಾಲಯ

ನಟಿ ಕಂಗಾನಾ ರಾಣಾವತ್ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿದ ನ್ಯಾಯಾಲಯ

ಬಾಲಿವುಡ್ ನಟಿ ಕಂಗಾನಾ ರಾಣಾವತ್ ವಿರುದ್ಧ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದ ನಟಿ ವಿರುದ್ಧ ಮುಂಬೈಯ ಅಂಧೇರಿ ಮೆಟ್ರೋಪಾಲಿಟನ್ ಮಾಜಿಸ್ಟ್ರೇಟ್ ನ್ಯಾಯಾಲಯವೊಂದು ಸೋಮವಾರ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.


ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಳಿಕ ರಿಪಬ್ಲಿಕ್ ಟಿವಿಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ನಟಿ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ನವೆಂಬರ್ ತಿಂಗಳಲ್ಲಿ ಅಖ್ತರ್ ಅವರು ವಕೀಲ ಜೈ ಭಾರದ್ವಾಜ್ ಮೂಲಕ ಭಾರತೀಯ ದಂಡ ಸಂಹಿತೆ 499 ಮತ್ತು 500 ಸೆಕ್ಷನ್ ಗಳಡಿ ಖಾಸಗಿ ದೂರು ದಾಖಲಿಸಿದ್ದರು.
ಸೋಮವಾರ ಅಖ್ತರ್ ಪರ ವಕೀಲರಾದ ವೃಂದಾ ಗ್ರೋವರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬುದು ತಿಳಿದಿದ್ದರೂ ನಟಿ ಇಂದು ಹಾಜರಾಗಿಲ್ಲ. ಮಾತ್ರವಲ್ಲ ಈ ಸಂಬಂಧ ಯಾವುದೇ ಅರ್ಜಿಯನ್ನೂ ಹಾಕಿಲ್ಲ ಎಂದು ವೃಂದಾ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ವಾದ –ವಿವಾದ ಆಲಿಸಿದ ಬಳಿಕ ನ್ಯಾಯಾಧೀಶ ಆರ್.ಆರ್. ಖಾನ್ ಅವರು ನಟಿ ಕಂಗಾನಾ ವಿರುದ್ಧ ಜಾಮೀನುರಹಿತ ವಾರಂಟ್ ನ ಆದೇಶ ಹೊರಡಿಸಿದರು.

Join Whatsapp
Exit mobile version