Home ಟಾಪ್ ಸುದ್ದಿಗಳು ಕೇಂದ್ರ ಸರ್ಕಾರ ಕುತಂತ್ರ ಮಾಡಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ: ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರ ಕುತಂತ್ರ ಮಾಡಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರ ಕುತಂತ್ರ ಮಾಡಿ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಮೌನ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಳೆದ 9 ವರ್ಷಗಳಿಂದ ನೆಹರೂ ಕುಟುಂಬದ ಮೇಲೆ ನಿರಂತರವಾಗಿ ಗದಾಪ್ರಹಾರ ಮಾಡುತ್ತಿದೆ. ಆರ್ ಎಸ್ ಎಸ್ ಹಾಗೂ ಬಿಜೆಪಿ ನಿರಂತರವಾಗಿ ಈ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಬಂದಿದೆ. ಬಿಜೆಪಿ ಮುಖಂಡರು ಮಾಡಿದ ಅನೇಕ ಭಾಷಣ ಟೀಕೆಗಳಿಗೆ ಇಂದಿಗೂ ಶಿಕ್ಷೆ ಆಗಿಲ್ಲ. ಆದರೆ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಮಾಡಿದ ಭಾಷಣ ಮುಂದಿಟ್ಟುಕೊಂಡು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. 2024ರ ಚುನಾವಣೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಕಷ್ಟವಾಗಲಿದೆ ಎಂದು ನಮ್ಮ ನಾಯಕರ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.

ಭಾರತ ಜೋಡೋ ಯಾತ್ರೆ ಬಳಿಕ ರಾಹುಲ್ ಗಾಂಧಿ ಅವರಿಗೆ ದೇಶದ ಜನರಿಂದ ವ್ಯಾಪಕ ವಿಶ್ವಾಸ ದೊರೆತಿದ್ದು, ಇದನ್ನು ಸಹಿಸಲಾಗದೆ ಈ ಕುತಂತ್ರ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನ ನೀಡಿದ ತೀರ್ಪು ಇದಕ್ಕೆ ಸಾಕ್ಷಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಯಾತ್ರೆ ಪೈಕಿ ಅವರು ಎಲ್ಲೆಲ್ಲಿ ನಡೆದಿದ್ದಾರೆ ಅಲ್ಲೆಲ್ಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರು ಗೆದ್ದಿದ್ದಾರೆ. ಇದನ್ನು ಬಿಜೆಪಿಯಿಂದ ಸಹಿಸಲು ಆಗುತ್ತಿಲ್ಲ. ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಿ, ಅವರ ಜತೆ ದನಿಗೂಡಿಸಿ ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದರು.

ರಾಹುಲ್ ಗಾಂಧಿ ದೇಶದ ಬಡವರ ಧ್ವನಿ. ಯುವಕರು, ಶ್ರಮಿಕರು, ಶೋಷಿತರ ಧ್ವನಿ. ಏನೇ ತೊಂದರೆ ಆದರೂ ನನ್ನ ಹೋರಾಟ ಅಂತ್ಯಗೊಳ್ಳುವುದಿಲ್ಲ. ಈ ಹೋರಾಟದಲ್ಲಿ ಎಂತಹುದೇ ಬೆಲೆ ತೆರಲು ಸಿದ್ಧ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.ಅವರ ವಿರುದ್ಧ ಅನಗತ್ಯವಾಗಿ ಮಾನನಷ್ಟ ಮೊಕದ್ದಮೆ ಹಾಕಿ ಶಿಕ್ಷೆ ಪ್ರಕಟ ಆದ 24 ಗಂಟೆಗಳಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಅವರ ಪರವಾಗಿ ಇಡೀ ರಾಜ್ಯದ ಜನತೆ ನಿಲ್ಲಲಿದೆ. ನಿಮ್ಮ ಹೋರಾಟ ಮುಂದುವರಿಯಬೇಕು. ನಿಮ್ಮ ಧ್ವನಿ ಹಾಗೂ ಶಕ್ತಿ ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡಲು ಮುಂದಾಗಿರುವ ರಾಹುಲ್ ಗಾಂಧಿ ಅವರ ಪರವಾಗಿ ಇರಬೇಕು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಗಾಂಧಿ ಕುಟುಂಬ ಮಾತ್ರ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಗಿಡಲು ಸಾಧ್ಯ.  2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.

Join Whatsapp
Exit mobile version