Home ಟಾಪ್ ಸುದ್ದಿಗಳು ಹೆಣ ಕಂಡೊಡನೆ ರಣಹದ್ದುಗಳಂತೆ ಹಾರಿಬರುವ ಬಿಜೆಪಿಗರಿಗೆ ಈಗ ಆಘಾತ ಉಂಟಾಗಿದೆ: ಕಾಂಗ್ರೆಸ್

ಹೆಣ ಕಂಡೊಡನೆ ರಣಹದ್ದುಗಳಂತೆ ಹಾರಿಬರುವ ಬಿಜೆಪಿಗರಿಗೆ ಈಗ ಆಘಾತ ಉಂಟಾಗಿದೆ: ಕಾಂಗ್ರೆಸ್

►‘ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ’


ಬೆಂಗಳೂರು: ‘ಹೆಣ ಕಂಡೊಡನೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿಗೆ ಈಗ ಆಘಾತ ಉಂಟಾಗಿದೆ. ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ. ಹೆಣ ರಾಜಕೀಯ ಮಾಡುವ ಬಿಜೆಪಿ ಈಗ ಉತ್ತರ ನೀಡಬೇಕು ಎಂದು ವೇಣುಗೋಪಾಲ ಹತ್ಯೆ ಪ್ರಕರಣ ಪ್ರಸ್ತಾಪಿಸಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.


ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಕಾರ್ಯಕರ್ತರನ್ನು ಬೆಳೆಸುತ್ತಿದೆಯೇ, ಕೊಲೆಗಡುಕರನ್ನು ಬೆಳೆಸುತ್ತಿದೆಯೇ? ಸರ್ಕಾರದ ಮೇಲೆ ಆರೋಪಿಸಲು ಸಜ್ಜಾಗಿದ್ದ ಬಿಜೆಪಿ ನಾಯಕರು ತಮ್ಮವರೇ ಕೊಲೆಗಾರರು ಎಂದು ತಿಳಿದ ನಂತರ ಬಿಲ ಸೇರಿರುವುದೇಕೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಅದ್ಯಾವುದೋ ಬ್ರಿಗೇಡ್ ಹೆಸರಿನಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದು ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು. ದಲಿತರೆಂದರೆ ಬಿಜೆಪಿಯವರಿಗೆ ಯಾಕಿಷ್ಟು ಅಸಹನೆ? ದಲಿತರಿಗೆ, ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು. ಬಿಜೆಪಿಯ ಹತ್ಯಾ ರಾಜಕೀಯಕ್ಕೆ ದಲಿತ ಹಿಂದುಳಿದ ವರ್ಗದವರನ್ನೇ ಬಲಿ ಪಡೆಯುತ್ತಿರುವುದೇಕೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.


ಕಲಬುರಗಿಯಲ್ಲಿ ನಡೆದ ಕಾನ್ ಸ್ಟೆಬಲ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪಾತ್ರ, ಟಿ. ನರಸೀಪುರದಲ್ಲಿ ನಡೆದ ವೇಣುಗೋಪಾಲ್ ಹತ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ಕೈವಾಡ. ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೊ ಬ್ಲಾಕ್ ಮೇಲ್ ಪ್ರಕರಣದಲ್ಲಿ ಎಬಿವಿಪಿ ಕಾರ್ಯಕರ್ತನ ಪಾತ್ರ, ಸೋಲಿನ ಹತಾಶೆಯಲ್ಲಿರುವ ಬಿಜೆಪಿ ನಮ್ಮ ಸರ್ಕಾರದ ಹೆಸರು ಕೆಡಿಸಲು ಕೊಲೆಗಡುಕರ ಮೋರ್ಚಾಕ್ಕೆ ಚಾಲನೆ ನೀಡಿದೆಯೇ? ಎಂದು ಎಂದು ಕಾಂಗ್ರೆಸ್ ಟೀಕಿಸಿದೆ.


ಜೈನಮುನಿ ಹತ್ಯೆ ಪ್ರಕರಣ, ವೇಣುಗೋಪಾಲ್ ಹತ್ಯೆ ಪ್ರಕರಣ, ಬೆಂಗಳೂರಿನ ಜೋಡಿ ಕೊಲೆ ಪ್ರಕರಣ ಸಂಬಂಧ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿದ ನಮ್ಮ ಪೋಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಹೆಣ ಕಂಡೊಡನೆ ಹಾರಿ ಬರುವ ಬಿಜೆಪಿಗರಿಗೆ ತಮ್ಮ ಆಡಳಿತದಲ್ಲಿ ನಡೆದ ಹತ್ಯೆಗಳೆಷ್ಟು? ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ನೀಡಿದ್ದೇಕೆ ಎಂದು ಹೇಳುವರೇ? ಎಂದು ಕಾಂಗ್ರೆಸ್ ಕುಟುಕಿದೆ.

Join Whatsapp
Exit mobile version