Home ಟಾಪ್ ಸುದ್ದಿಗಳು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಲು ತಯಾರಿ: ಪಾದಯಾತ್ರೆಗೆ ಮಾಡಲಿರುವ ವಿಜಯ್

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಲು ತಯಾರಿ: ಪಾದಯಾತ್ರೆಗೆ ಮಾಡಲಿರುವ ವಿಜಯ್

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಸುದ್ದಿ ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ವಿಜಯ್​ಗೆ ಅತಿ ದೊಡ್ಡ ಅಭಿಮಾನಿ ಬಳಗ ತಮಿಳುನಾಡಿನಲ್ಲಿದೆ. ಒಂದೊಮ್ಮೆ ಅವರು ರಾಜಕೀಯ ಪ್ರವೇಶಿಸಿದರೆ ತಮಿಳುನಾಡಿನ ಪ್ರಸ್ತುತ ಪಕ್ಷ ರಾಜಕೀಯದ ಚಿತ್ರಣ ಬದಲಾಗಲಿದೆ. ವಿಜಯ್ ಸಹ ಪೂರ್ವತಯಾರಿಯೊಟ್ಟಿಗೆ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದು ಕೆಲವೇ ದಿನಗಳಲ್ಲಿ ಘೋಷಣೆ ಹೊರಬೀಳಲಿದೆ.

ರಾಜಕೀಯ ಪ್ರವೇಶದ ಕುರಿತಾಗಿ ವಿಜಯ್, ತಮ್ಮ ಅಭಿಮಾನಿ ಸಂಘಟನೆ ವಿಜಯ್ ಮಕ್ಕಳ್ ಇಯಕ್ಕಂನ ಸದಸ್ಯರೊಟ್ಟಿಗೆ ಜುಲೈ 11 ರಂದು ಸಭೆ ನಡೆಸಿದ್ದು ಹಲವು ವಿಷಯಗಳ ಚರ್ಚೆ ಮಾಡಿದ್ದಾರೆ. ವಿಜಯ್ ಮಕ್ಕಳ್ ಇಯಕ್ಕಂನ ಸದಸ್ಯರಿಗೆ ರಾಜಕೀಯ ಪ್ರವೇಶದ ಬಗ್ಗೆ ಖಾತ್ರಿ ನೀಡಿದ್ದು, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಅವರು ಮಾಡಬೇಕಾದ ಕಾರ್ಯಗಳ ಬಗ್ಗೆ ಕಾರ್ಯಸೂಚಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ರಾಜಕೀಯ ಪ್ರವೇಶ ಘೋಷಿಸಿದ ಕೂಡಲೇ ರಾಜ್ಯದಾದ್ಯಂತ ಪಾದಯಾತ್ರೆ ಮೂಲಕ ಪ್ರವಾಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಪ್ರತಿ ಜಿಲ್ಲೆಗೂ ಪಾದಯಾತ್ರೆ ಮೂಲಕ ಭೇಟಿ ನೀಡಲು ವಿಜಯ್ ನಿಶ್ಚಯ ಮಾಡಿದ್ದು, ರಾಜಕೀಯ ಪ್ರವೇಶ ಘೋಷಿಸಿದ ನಂತರ ವಿಜಯ್ ಪಾದಯಾತ್ರೆ ಪ್ರಾರಂಭವಾಗಲಿದೆ. ವಿಜಯ್​ಗೆ ತಮ್ಮ ಅಭಿಮಾನಿಗಳ ಬಲದ ಜೊತೆಗೆ ರಜನೀಕಾಂತ್ ಹಾಗೂ ಅಜಿತ್ ಕುಮಾರ್ ಅವರ ಬೆಂಬಲವೂ ದೊರೆತಿದ್ದು ಆ ನಟರ ಅಭಿಮಾನಿಗಳು ಸಹ ವಿಜಯ್​ಗೆ ಬೆಂಬಲಿಸುವ ದೊಡ್ಡ ಸಾಧ್ಯತೆ ಇದೆ.

ವಿಜಯ್​ ರಾಜಕೀಯ ಪ್ರವೇಶಕ್ಕೆ ಕಾರಣ ಏನೆಂಬ ಬಗ್ಗೆ ಕೆಲವು ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಜಯ್​ರ ವಿರುದ್ಧ ಬಿಜೆಪಿ ಮಾಡಿದ್ದ ವೈಯಕ್ತಿಕ ಟೀಕೆ, ಐಟಿ ರೇಡ್​ಗಳಿಂದಲೇ ವಿಜಯ್​ಗೆ ರಾಜಕೀಯ ಪ್ರವೇಶಿಸಬೇಕೆಂಬ ಕಿಚ್ಚು ಹತ್ತಿತು ಎಂದೂ ಸಹ ಹೇಳಲಾಗುತ್ತಿದೆ. ಆದರೆ ಇದಕ್ಕೆಲ್ಲ ವಿಜಯ್ ಅವರೇ ಉತ್ತರ ನೀಡಬೇಕಾಗಿದೆ.

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ರಂಗಕ್ಕೆ ಸೇರಿದವರು ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಸಿನಿಮಾ ರಂಗದಿಂದ ರಾಜಕೀಯ ಪ್ರವೇಶಿಸಿದ ಎಂಜಿಆರ್, ಕರುಣಾನಿಧಿ, ಜಯಲಲಿತಾ ಅವರುಗಳು ಸಿಎಂ ಆಗಿ ಸೇವೆ ಸಲ್ಲಿಸಿದವರೇ. ಈಗಲೂ ಹಲವು ತಮಿಳು ಚಿತ್ರನಟರು ಸಕ್ರಿಯ ರಾಜಕೀಯದಲ್ಲಿದ್ದಾರೆ. ಕಮಲ್ ಹಾಸನ್ ಸಹ ಮಕ್ಕಳ್ ನಿಧಿ ಮಯಂ ಹೆಸರಿನ ಪಕ್ಷ ಸ್ಥಾಪಿಸಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಜನೀಕಾಂತ್ ಸಹ ಪಕ್ಷ ಸ್ಥಾಪನೆಗೆ ಯತ್ನಿಸಿ ಆರೋಗ್ಯ ಕಾರಣ ನೀಡಿ ಹಿಂದೆ ಸರಿದಿದ್ದರು. ಈಗ ಅವರೇ ವಿಜಯ್​ಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ.

Join Whatsapp
Exit mobile version