Home ಟಾಪ್ ಸುದ್ದಿಗಳು ಬಹುಕೋಟಿ PSI ಹಗರಣ | ದಿವ್ಯಾ ಪತಿ ಸೇರಿದಂತೆ 12 ಆರೋಪಿಗಳ ಜಾಮೀನು ಅರ್ಜಿ ವಜಾ

ಬಹುಕೋಟಿ PSI ಹಗರಣ | ದಿವ್ಯಾ ಪತಿ ಸೇರಿದಂತೆ 12 ಆರೋಪಿಗಳ ಜಾಮೀನು ಅರ್ಜಿ ವಜಾ

ಕಲ್ಬುರ್ಗಿ: ಬಹುಕೋಟಿ PSI ನೇಮಕಾತಿ ಹಗರಣದಲ್ಲಿ ಬಂಧಿತ ದಿವ್ಯಾ ಪತಿ ಸೇರಿದಂತೆ 12 ಆರೋಪಿಗಳ ಜಾಮೀನು ಅರ್ಜಿಗಳನ್ನು ಮೂರನೇ ಜೆಎಂಎಫ್ ಕೋರ್ಟ್ ನ್ಯಾಯಾಲಯ ಮತ್ತು ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ವಜಾಗೊಳಿಸಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ್ ನೇಸರಗಿ ಅವರು ಬುಧವಾರ ತೀರ್ಪನ್ನು ಕಾಯ್ದಿರಿಸಿದ್ದಾರೆ. ಜಾಮೀನು ಮಂಜೂರು ಮಾಡಿದರೆ ವಿಚಾರಣೆಗೆ ಅಡ್ಡಿಯಾಗಲಿದ್ದು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಸಿಐಡಿ ಪರ ವಕೀಲ, ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ವಾದಿಸಿದ್ದಾರೆ.

ಇದನ್ನು ಪರಿಗಣಿಸಿದ ನ್ಯಾಯಾಧೀಶರು ಪ್ರಕರಣದ ಆರೋಪಿಗಳಾದ ಮಹಾಂತೇಶ ಪಾಟೀಲ, ಹಯ್ಯಾಳಿ ನಿಂಗಣ್ಣ ದೇಸಾಯಿ, ರುದ್ರಗೌಡ ಬಲರಾಯಪ್ಪ, ಶರಣಪ್ಪ ಬೋರಗಿ, ವಿಶಾಲ ಬಸವರಾಜ ಶಿರೂರ, ಮಲ್ಲಿಕಾರ್ಜುನ ಮೇಳಕುಂದಿ, ದಿವ್ಯಾ ಅವರಿಗೆ ಆಶ್ರಯ ನೀಡಿದ ಮಹಾರಾಷ್ಟ್ರದ ಸುರೇಶ ಕಾಟೆಗಾಂವ, ಕಾಳಿದಾಸ ಹಾಗೂ ದಿವ್ಯಾ ಕಾರು ಚಾಲಕ ಸದ್ದಾಂ ಎಂಬವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಇತರೆ ಮೂವರು ಆರೋಪಿಗಳಾದ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ, ಅಭ್ಯರ್ಥಿ ಪ್ರವೀಣಕುಮಾರ್ ಹಾಗೂ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶಿಕ್ಷಕಿ ಸುಮಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್, ಎಲ್ಲಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಸಿಐಡಿ ಪರವಾಗಿ ಒಂದನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.

Join Whatsapp
Exit mobile version