Home ಕರಾವಳಿ ಪ್ರಮೋದ್ ಮಧ್ವರಾಜ್ ಅವಕಾಶವಾದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ ಆಕ್ರೋಶ

ಪ್ರಮೋದ್ ಮಧ್ವರಾಜ್ ಅವಕಾಶವಾದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ ಆಕ್ರೋಶ

ಉಡುಪಿ: ಕಾಂಗ್ರೆಸ್ ಪಕ್ಷದ ನೀಡಿದ ಸಾಕಷ್ಟು ಹುದ್ದೆಗಳನ್ನು ಅನುಭವಿಸಿದ ಹೊರತಾಗಿಯೂ ಪಕ್ಷ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಅವಕಾಶವಾದಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಅವರಿಗೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ವಹಿಸಲಾಗಿತ್ತು. ನಂತರ ಸಚಿವ ಸ್ಥಾನವನ್ನೂ ನೀಡಲಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಿಲ್ಲಲು ಕಾಂಗ್ರೆಸ್ ಬೆಂಬಲ ಸೂಚಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಮೋದ್ ಮಧ್ವರಾಜ್‌ ಅವರಿಗೆ ಪಕ್ಷದಿಂದ ಯಾವುದೇ ರೀತಿಯಲ್ಲೂ ಅನ್ಯಾಯವಾಗಿಲ್ಲ. ಎಲ್ಲವನ್ನೂ ಪಡೆದು ದುಡುಕಿನ ನಿರ್ಧಾರ ತೆಗೆದುಕೊಂಡು ಪಕ್ಷವನ್ನು ತೊರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವಾರು ಮಹತ್ವದ ಹುದ್ದೆಗಳನ್ನು ಪ್ರಮೋದ್ ಮಧ್ವರಾಜ್ ಹೇಳಿದವರಿಗೇ ನೀಡಲಾಗಿದ್ದರೂ ಕೂಡ ರಾಜೀನಾಮೆ ಪತ್ರದಲ್ಲಿ ಜಿಲ್ಲಾ ಕಾಂಗ್ರೆಸ್‌ ವಿರುದ್ಧ ಆರೋಪಗಳನ್ನು ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಭೂಷಣವಲ್ಲ ಎಂದು ಧೃವ ನಾರಾಯಣ್ ಟೀಕಿಸಿದ್ದಾರೆ.

ಬಿಜೆಪಿಗೆ ಹೋಗುವ ನೆಪದಲ್ಲಿ ಜಿಲ್ಲಾ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿದ್ದಾರೆ. ಪಕ್ಷದಿಂದ ಕಿಂಚಿತ್ತೂ ಅಗೌರವ ತೋರಿಸಿಲ್ಲ. ಎರಡು ಬಾರಿ ಶಾಸಕರಾಗಿರುವ, ಹಲವು ಹುದ್ದೆಗಳನ್ನು ನಿಭಾಯಿಸಿರುವ ವಿನಯ ಕುಮರ್ ಸೊರಕೆ ಅವರಿಗೆ ಸಮನಾಗಿ ಪ್ರಮೋದ್ ಮಧ್ವರಾಜ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ನೀಡಿದ್ದರು. ಆದರೂ ಪಕ್ಷಕ್ಕೆ ದ್ರೋಹ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಪ್ರಮೋದ್‌ ಅನುಪಸ್ಥಿತಿ ಪಕ್ಷಕ್ಕೆ ಹಿನ್ನಡೆಯಲ್ಲ. ಜಿಲ್ಲಾ ನಾಯಕರು, ಕಾರ್ಯಕರ್ತರು ಸಂಘಟಿತರಾಗಿ ತಳಮಟ್ಟದಿಂದ ಪಕ್ಷ ಕಟ್ಟಿ, ಬಲವರ್ಧನೆ ಮಾಡುತ್ತೇವೆ. ಮೊದಲ ಭಾಗವಾಗಿ ಉಡುಪಿಯಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದು ಧೃವನಾರಾಯಣ್ ತಿಳಿಸಿದ್ದಾರೆ.

ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಿಸುವುದಾಗಿ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ. ನಳಿನ್‌ ಸಮರ್ಥ ಅಧ್ಯಕ್ಷರಾಗಿದ್ದರೆ, ತಾಕತ್ತಿದ್ದರೆ ಕಳಂಕ ರಹಿತ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಬಂಧಿಸಿ ಎಂದು ಧೃವನಾರಾಯಣ್ ಸವಾಲು ಹಾಕಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಅರ್ಕಾವತಿ ಡಿನೋಟಿಫಕೇಷನ್ ಪ್ರಕರಣದ ತನಿಖೆ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿದ ಧೃವನಾರಾಯಣ್, ಸಿದ್ದರಾಮಯ್ಯ ವಿರುದ್ಧ ಆಧಾರ ರಹಿತ ಹೇಳಿಕೆ ಖಂಡನೀಯ ಎಂದು ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿಬಂದಿದ್ದಾರೆ ಎನ್ನುವ ನಳಿನ್, ಯಡಿಯೂರಪ್ಪ, ಅಮಿತ್ ಶಾ, ಜನಾರ್ದನ ರೆಡ್ಡಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಹಿಂದೆ ಮಾವನ ಮನೆಗೆ ಹೋಗಿ ಬಂದಿದ್ದಾ ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿನಯಕುಮಾರ್ ಸೊರಕೆ, ಯು.ಆರ್.ಸಭಾಪತಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ವಕ್ತಾರಾದ ಭಾಸ್ಕರ ರಾವ್ ಕಿದಿಯೂರು, ಬಿಪಿನ್ ಚಂದ್ರಪಾಲ್ ನಕ್ರೆ, ದಿನಕರ ಹೇರೂರು, ವೆರೋನಿಕಾ ಕರ್ನೆಲಿಯೋ, ಹರಿಶ್ ಕಿಣಿ, ಅಬೀಬ್ ಆಲಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ.ನರಸಿಂಹಮೂರ್ತಿ, ಪ್ರಖ್ಯಾತ್‌ ಶೆಟ್ಟಿ, ದೀಪಕ್ ಕೋಟ್ಯಾನ್, ಅಣ್ಣಯ್ಯ ಸೆರಿಗಾರ್ ಉಪಸ್ಥಿತರಿದ್ದರು.

Join Whatsapp
Exit mobile version