Home ಮಲೆನಾಡು ಮಡಿಕೇರಿ | ಮಾಲ್ದಾರೆಯಲ್ಲಿ ಕೊಳವೆ ಬಾವಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ: ಕೆ.ಜಿ.ಬೋಪಯ್ಯ

ಮಡಿಕೇರಿ | ಮಾಲ್ದಾರೆಯಲ್ಲಿ ಕೊಳವೆ ಬಾವಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ: ಕೆ.ಜಿ.ಬೋಪಯ್ಯ

ಮಡಿಕೇರಿ: ಕೊಡಗು ಜಿಲ್ಲೆಯ ಮಾಲ್ದಾರೆ ವ್ಯಾಪ್ತಿಯ ಹಲವು ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಳೆದ ಏಳೆಂಟು ವರ್ಷದಿಂದ ಬಾಕಿ ಇದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ  ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾಲ್ದಾರೆ ವ್ಯಾಪ್ತಿಯಲ್ಲಿ ಅನಾದಿ ಕಾಲದಿಂದಲೂ ವಾಸ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಕೊಳವೆ ಬಾವಿಗೆ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಅನುಮತಿ ನೀಡಿರುವಾಗ ವಿದ್ಯುತ್ ಮಾರ್ಗಕ್ಕೆ ತೊಂದರೆ ನೀಡುತ್ತಿರುವುದು ಏಕೆ ಎಂದು ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ಆದರೂ ಜಿಲ್ಲೆಯ ತಿತಿಮತಿ, ಬಾಳೆಲೆ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ಮಾಡುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಅರಣ್ಯವೂ ಉಳಿಯಬೇಕು. ಜೊತೆಗೆ ಅಲ್ಲಿ ಬದುಕುತ್ತಿರುವ ಮೂಲ ನಿವಾಸಿಗಳಿಗೆ ಮೂಲ ಸೌಲಭ್ಯವನ್ನು ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕಾನೂನಿನ ಇತಿಮಿತಿಯಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಅವಕಾಶ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು.

Join Whatsapp
Exit mobile version