Home ಮಲೆನಾಡು ಹಾಸನ | ಸರ ಕೀಳಲು ವಿರೋಧ: ಮಹಿಳೆ ಜೀವ ತೆಗೆದ ಕಳ್ಳ ಪೊಲೀಸರ ವಶಕ್ಕೆ

ಹಾಸನ | ಸರ ಕೀಳಲು ವಿರೋಧ: ಮಹಿಳೆ ಜೀವ ತೆಗೆದ ಕಳ್ಳ ಪೊಲೀಸರ ವಶಕ್ಕೆ

ಹಾಸನ: ಚೈನ್ ಕೀಳಲು ಯತ್ನಿಸಿದ್ದನ್ನು ತಡೆದ ಮಹಿಳೆಯನ್ನು ಖದೀಮನೊಬ್ಬ ಕೆರೆಗೆ ತಳ್ಳಿ ಜೀವ ತೆಗೆದಿರುವ ಘಟನೆ ನಗರದ ಹೊರ ವಲಯದ ಗವೇನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

 ಗ್ರಾಮದ ನೀಲಾ(50) ಮೃತ ಮಹಿಳೆ

ಬೆಳಗ್ಗೆ ನಗರಕ್ಕೆ ಬಂದು ಉಜಿರೆಯಲ್ಲಿ ಓದುತ್ತಿರುವ ಮಗನಿಗೆ ಬೆಡ್‌ ಶೀಟ್, ಇತ್ಯಾದಿ ವಸ್ತುಗಳನ್ನು ತೆಗೆದುಕೊಟ್ಟು ಮನೆಗೆ ವಾಪಸ್ಸಾಗುತ್ತಿದ್ದರು. ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ದಿಢೀರ್ ಎದುರಾದ ಕಂದಲಿಯ ಭರತ್ ಎಂಬ ಖದೀಮ, ನೀಲಾ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಕದಿಯಲು ವಿಫಲಯತ್ನ ನಡೆಸಿದ್ದಾನೆ. ಅರ್ಧ ಸರ ಕಳ್ಳನ ಕೈ ಸೇರಿದ್ದರೆ ಉಳಿದರ್ಧ ಮಹಿಳೆ ಬಳಿಯಲ್ಲೇ ಇದೆ. ಆದರೂ ಇದಕ್ಕೆ ಇಡೀ ಚಿನ್ನದ ಸರ ಕೀಳಲು ಅವಕಾಶ ನೀಡದೇ ಇದ್ದಾಗ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಕೆರೆಯ ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.

ನಂತರ ಪರಾರಿಯಾಗಲು ಯತ್ನಿಸಿದ ಖದೀಮನನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿ ತಿಳಿದು ಎಸ್ಪಿ ಆರ್.ಶ್ರೀನಿವಾಸ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೆಚ್ಚಿ ಬೀಳಿಸಿದ ಘಟನೆ:

ಈವರೆಗೆ ಜಿಲ್ಲೆಯ ಹಲವೆಡೆ ಬೈಕ್‌ ನಲ್ಲಿ ಬಂದು ಇಲ್ಲವೆ ಹೊಂಚು ಹಾಕಿ ಚೋರರು ಬೆಲೆಬಾಳುವ ಸರ ಕಿತ್ತು ಪರಾರಿಯಾಗುತ್ತಿದ್ದರು. ಆದರೀಗ ಜೀವ ತೆಗೆಯುವ ಹಂತಕ್ಕೂ ಹೋಗಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.

Join Whatsapp
Exit mobile version