Home ಟಾಪ್ ಸುದ್ದಿಗಳು ವಿಳಂಬ ಧೋರಣೆ ಬಿಟ್ಟು ಕೆಲಸ ಮಾಡಿ: ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪ್ರಿಯಾಂಕ್‌ ಖರ್ಗೆ ಸೂಚನೆ

ವಿಳಂಬ ಧೋರಣೆ ಬಿಟ್ಟು ಕೆಲಸ ಮಾಡಿ: ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪ್ರಿಯಾಂಕ್‌ ಖರ್ಗೆ ಸೂಚನೆ

ಬೆಂಗಳೂರು: ಮಹಾತ್ಮಗಾಂಧಿ ರಾಷ್ಡ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಜಿಲ್ಲೆಗಳಲ್ಲಿ ಅವಶ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ವಿಳಂಬವಿಲ್ಲದೆ ಕಾರ್ಯಗತಗೊಳಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಉತ್ಪಾದಕತೆಯ ಬಗ್ಗೆ ತಮ್ಮ ಗಮನ ಹರಿಸಬೇಕೆಂದು ಸಚಿವರು ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಕಾರ್ಯುಕ್ರಮಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿ ಮಾತನಾಡುತ್ತಿದ್ದ ಸಚಿವರು ಅಧಿಕಾರಿಗಳಿಗೆ ಸಮಸ್ಯೆ ಹಾಗೂ ಪರಿಹಾರ ಎರಡರ ಬಗ್ಗೆ ಅರಿವಿದ್ದರೂ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಳಂಬ ಧೋರಣೆ ತಳೆಯುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯ್ತಿ ಕಟ್ಟಡಗಳ ನಿರ್ಮಾಣ

ಗ್ರಾಮ ಪಂಚಾಯಿತಿಗಳ ಆಸ್ತಿ, ಅವುಗಳ ವ್ಯಾಪ್ತಿ, ಸದಸ್ಯರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡಗಳ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲು ಸೂಚಿಸಿದ ಸಚಿವರು, ನಿರ್ಮಾಣಕ್ಕೆ ಮುನ್ನಾ ವಿವರಗಳನ್ನು ಸಂಗ್ರಹಿಸುವ ಕೆಲಸವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದರು.

ಜಲಜೀವನ್‌ ಮೆಷಿನ್‌ ಅಡಿ ನಡೆಯುತ್ತಿರುವ ಪ್ರತಿ ಗ್ರಾಮಗಳಿಗೆ ಸಂಬಂಧಿಸಿದ ಕಾಮಗಾರಿಗಳ ವಿವರಗಳನ್ನು ಪಟ್ಟಿ ಮಾಡಲು ತಿಳಿಸಿದ ಸಚಿವರು ಪ್ರತಿ ಕಾಮಗಾರಿಗಳ ಉದ್ದ, ಅವುಗಳಿಗೆ ಮಾಡಲಾಗುತ್ತಿರುವ ವೆಚ್ಚ, ಕಾಮಗಾರಿಯ ಸ್ಥಿತಿಗತಿಗಳ ಅಂಕಿಅಂಶಗಳನ್ನು ಸಂಗ್ರಹಿಸಲು ಹೇಳಿದರು.

ತಾಲ್ಲೂಕುಗಳಿಗೆ ಭೇಟಿ ನೀಡಲು ಸಿಇಒಗಳಿಗೆ ಸೂಚನೆ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದಿಷ್ಟ ದಿನದಂದು ನಿರ್ದಿಷ್ಟ ತಾಲ್ಲೂಕಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕರ ಅಹವಾಲು ಆಲಿಸಲು ಕ್ಯಾಲೇಂಡರ್‌ ಹಾಕಿಕೊಳ್ಳುವಂತೆ ಸೂಚಿಸಿ ಆದೇಶ ಹೊರಡಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶಿಸಿದರು.

ಅಂತರ್ಜಲ ಬರಿದಾಗುತ್ತಿರುವ ಬಗ್ಗೆ ಆತಂಕ

ರಾಜ್ಯದಲ್ಲಿ ಹೆಚ್ಚು ಅಂತರ್ಜಲ ತುಂಬಿದ್ದ ಕೊಡಗು ಹಾಗೂ ಮಲೆನಾಡಿನಲ್ಲಿ ಅಂತರ್ಜಲ ಕುಸಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು ಈ ಬಗ್ಗೆ ಕಾರಣಗಳನ್ನು ಪತ್ತೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಪ್ರತಿ ಗ್ರಾಮಗಳಿಗೆ ಸಂಬಂಧಿಸಿದಂತೆ ಕೆರೆ, ಜಲಾಶಯ, ನದಿ, ಕೊಳವೆಬಾವಿ ಮುಂತಾದ ನೀರಿನ ಸೌಲಭ್ಯಗಳ ವಿವರಗಳನ್ನು ಹೊಂದಿದಂತೆ ಮಾಹಿತಿ ಸಂಗ್ರಹಿಸಲು ಹೇಳಿದ ಸಚಿವರು, ತಾವು ಸಭೆಗಳಲ್ಲಿ ಅಧಿಕಾರಿಗಳಿಗೆ ಸೂಚಿಸುವ ವಿಷಯಗಳ ಬಗ್ಗೆ ಕ್ರಮ ಕೈಗೊಂಡು, ಅನುಪಾಲನ ವರದಿ ಸಲ್ಲಿಸಬೇಕೆಂದು, ಕೇವಲ ಕಳೆದ ಸಭೆಯ ನಿರ್ಣಯಗಳನ್ನು ತಮ್ಮ ಗಮನಕ್ಕೆ ತರಬಾರದೆಂದು ಸಚಿವರು ಅಧಿಕಾರಿಗಳಿಗೆ ಕಟ್ಟಿನಿಟ್ಟಾಗಿ ಸೂಚನೆ ನೀಡಿದರು. ಗ್ರಾಮೀಣ ಸಾಮಾಜಿಕ ಸ್ಥಿತಿಗಳ  ಬಗ್ಗೆ ಆವಿಷ್ಕಾರ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಆರ್ ಘಟಕಗಳ ಉಸ್ತುವಾರಿಗೆ ಕ್ರಮ ಕೈಗೊಳ್ಳಿ

ರಾಜ್ಯದಲ್ಲಿ 18,000 ಶುದ್ಧ ನೀರು ಸರಬರಾಜು ಮಾಡುವ ಆರ್.ಒ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳು ಕೆಟ್ಟು ನಿಂತಾಗ ಕೂಡಲೇ ದುರಸ್ತಿ ಮಾಡುವಂತೆ ಆರ್.ಒ ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಆಗಬೇಕಿದೆ ಎಂದು ಹೇಳಿದ ಸಚಿವರು ಈ ಸಂಬಂಧ ತೆಗೆದುಕೊಳ್ಳಲಾಗುವ ಕ್ರಮಗಳ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮ ಯೋಜಕರ ಬಳಕೆಗೆ ಸೂಚನೆ

ನಗರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರ ಯೋಜಕರನ್ನು ನೇಮಿಸಿಕೊಳ್ಳುವಂತೆ  ಗ್ರಾಮ ಯೋಜಕರನ್ನು ನೇಮಿಸಿಕೊಂಡು, ರಾಜ್ಯದಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಹಾಗೂ ಗ್ರಾಮಗಳಲ್ಲಿನ ಸೌಲಭ್ಯಗಳನ್ನು ಆಧರಿಸಿ ಶ್ರೇಣಿಗನುಸಾರ ಹಳ್ಳಿಗಳನ್ನು ಅಯ್ಕೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಶ್ರೀ ಅಂಜುಂ ಪರವೇಜ್‌, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಶ್ರೀ ಕೆ.ನಾಗೇಂದ್ರ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Join Whatsapp
Exit mobile version