Home ಟಾಪ್ ಸುದ್ದಿಗಳು ಮುಂಗಾರುಪೂರ್ವ ಮಳೆ ಜೋರು: ಸಿಡಿಲಿನಿಂದ ರಕ್ಷಿಸಿಕೊಳ್ಳಲು ಹವಾಮಾನ ಇಲಾಖೆ ನೀಡಿರುವ ಈ ಸಲಹೆ ಪಾಲಿಸಿ!

ಮುಂಗಾರುಪೂರ್ವ ಮಳೆ ಜೋರು: ಸಿಡಿಲಿನಿಂದ ರಕ್ಷಿಸಿಕೊಳ್ಳಲು ಹವಾಮಾನ ಇಲಾಖೆ ನೀಡಿರುವ ಈ ಸಲಹೆ ಪಾಲಿಸಿ!

0

ಬೆಂಗಳೂರು: ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಕಾಣಿಸಿಕೊಳ್ಳುವ ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಎಚ್ಚರಿಕೆಯ ಕಾರ್ಯ ವಿಧಾನಗಳ ಮುಖಾಂತರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಎಚ್ಚರಿಕೆ ಸಂದೇಶಗಳನ್ನು ಗಮನಿಸಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರು ಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು ಉತ್ತಮ. ಗುಡುಗು, ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಸುರಕ್ಷಿತವಾದ ಕಟ್ಟಡ ಗಳಾದ ಮನೆಗಳು, ಕಚೇರಿಗಳು, ಅಂಗಡಿಗಳು ಮತ್ತು ಕಿಟಕಿ ಮುಚ್ಚಿರುವಂತಹ ವಾಹನಗಳಲ್ಲಿ ಆಶ್ರಯ ಪಡೆಯುವುದು ಸೂಕ್ತ.

ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿಕೊಂಡು ಆಶ್ರಯ ಪಡೆಯುವುದು ಒಳ್ಳೆಯದು.ಕೆರೆ ಮತ್ತು ನದಿಗಳು ಹಾಗೂ ಇನ್ನಿತರೆ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವುದು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು ಅಗತ್ಯ. ಗುಡುಗು, ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣ ಮುಂದೂಡಬೇಕು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯಬೇಕು. ವಾಹನದ ಕಿಟಕಿಗಳನ್ನು ಮುಚ್ಚಿ ವಾಹನದ ಒಳಗೆ ಇರುವುದು ಹಾಗೂ ಮರಗಳು ಮತ್ತು ವಿದ್ಯುತ್ ಲೈನ್‌ಗಳಿಂದ ದೂರ ವಾಹನ ನಿಲುಗಡೆ ಮಾಡುವುದು, ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ ಅಪಾಯ ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು.

ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬಾರದು, ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿ ಬಳಸಬಾರದು,
ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರಬೇಕು. ಮಕ್ಕಳು, ವಯೋವೃದ್ದರು, ಜಾನುವಾರುಗಳು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸಬೇಕು.

ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು. ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯ ಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗುವುದು. ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆ ಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರಬೇಕು.

ಮುಂಜಾಗ್ರತಾ ಕ್ರಮಗಳು ಸಿಡಿಲು, ಮಿಂಚು ಬಡಿದ ಸಮಯದಲ್ಲಿ ಪ್ರಾಥಮಿಕವಾಗಿ 112, 108 ಸಹಾಯವಾಣಿಗೆ ಕರೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿ ಆಗಮಿಸುವ ಮುನ್ನ ಮಿಂಚಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ದೇಹದಲ್ಲಿ ಯಾವುದೇ ವಿದ್ಯುತ್ ಕಣಗಳು ಸಂಚಾರವಾಗುವುದಿಲ್ಲ. ಆದ್ದರಿಂದ ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವ ವ್ಯಕ್ತಿಗೆ ಯಾವುದೇ ಅಪಾಯವಿರುವುದಿಲ್ಲ.

ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಉಸಿರಾಟ ಹಾಗೂ ಎದೆ ಬಡಿತ ಪರೀಕ್ಷಿಸಬೇಕು. ವ್ಯಕ್ತಿಯ ದವಡೆಗೆ ನೇರವಾಗಿ ಕುತ್ತಿಗೆಯಲ್ಲಿರುವ ರಕ್ತನಾಳ ಪರೀಕ್ಷಿಸುವುದರಿಂದ ಸುಲಭವಾಗಿ ನಾಡಿ ಮಿಡಿತ ತಿಳಿಯಬಹುದು. ವ್ಯಕ್ತಿಯಲ್ಲಿ ಉಸಿರಾಟ ಕಂಡು ಬರದಿದ್ದಲ್ಲಿ, ತಕ್ಷಣವೇ ಕೃತಕ ಉಸಿರಾಟ ಪ್ರಕ್ರಿಯೆ ಪ್ರಾರಂಭಿಸಬೇಕು.

ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಕಣ್ಣಿನ ದೃಷ್ಟಿ ಕಿವಿ ಕೇಳಿಸುವಿಕೆ ಹಾಗೂ ಮೂಳೆಗಳು ಮುರಿದಿವೆಯೇ ಎಂದು ಪರೀಕ್ಷಿಸಬೇಕು. ಇದರಿಂದ ಪಾರ್ಶ್ವವಾಯು, ಲಕ್ವಾ ಹೊಡೆಯುವುದನ್ನು ಮತ್ತು ಅಧಿಕ ರಕ್ತಸ್ರಾವದಿಂದ ಉಂಟಾಗುವ ಅಪಾಯ ತಡೆಗಟ್ಟಬಹುದು.

ಈ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ (ದೂ. ಸಂಖ್ಯೆ: 08262-238950) ಮನವಿ ಮಾಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version