Home ಟಾಪ್ ಸುದ್ದಿಗಳು ತೆಲಂಗಾಣ, ಆಂಧ್ರದಲ್ಲಿ ಸದಸ್ಯರು ಮತ್ತು ಬೆಂಬಲಿಗರಿಗೆ ಎನ್.ಐ.ಎ ಕಿರುಕುಳ: ಪಾಪ್ಯುಲರ್ ಫ್ರಂಟ್ ಖಂಡನೆ

ತೆಲಂಗಾಣ, ಆಂಧ್ರದಲ್ಲಿ ಸದಸ್ಯರು ಮತ್ತು ಬೆಂಬಲಿಗರಿಗೆ ಎನ್.ಐ.ಎ ಕಿರುಕುಳ: ಪಾಪ್ಯುಲರ್ ಫ್ರಂಟ್ ಖಂಡನೆ

ನವದೆಹಲಿ: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಎನ್.ಐ.ಎ ದಾಳಿ, ಮಾರ್ಷಲ್ ಆರ್ಟ್ಸ್ ತರಬೇತುದಾರರ ಅನ್ಯಾಯದ ಬಂಧನ ಹಾಗೂ ಕಿರುಕುಳ ಮತ್ತು ಸಂಘಟನೆಯ ಸದಸ್ಯರು, ಬೆಂಬಲಿಗರನ್ನು ಗುರಿಪಡಿಸುತ್ತಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ವಿ.ಪಿ.ನಸರುದ್ದೀನ್ ಎಳಮರಂ ತೀವ್ರವಾಗಿ ಖಂಡಿಸಿದ್ದಾರೆ.

ಸೆಪ್ಟಂಬರ್ 17, 2022ರಂದು ಪಾಪ್ಯುಲರ್ ಫ್ರಂಟ್ ಕೇಂದ್ರಗಳಿಗೆ ದಾಳಿ ನಡೆಸಿ ಆಕ್ಷೇಪಾರ್ಹ ಸಾಮಗ್ರಿಗಳನ್ನು ವಶಪಡಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳವು ಹೇಳಿದೆ. ಈ ದಾಳಿಗಳು ಈ ರಾಜ್ಯಗಳಲ್ಲಿ ಸಂಘಟನೆಯ ಸದಸ್ಯರನ್ನು ಕಿರುಕುಳಕ್ಕೊಳಪಡಿಸುವ ಪ್ರಕ್ರಿಯೆಯ ಮುಂದುವರಿದ ಭಾಗವಾಗಿದೆ. ಜುಲೈಯಲ್ಲಿ ತೆಲಂಗಾಣ ಪೊಲೀಸರು ಮಾರ್ಷಲ್ ಆರ್ಟ್ಸ್ ತರಬೇತುದಾರ ಅಬ್ದುಲ್ ಖಾದಿರ್ ಅವರಿಗೆ ವಿಚಾರಣೆಯ ನೆಪದಲ್ಲಿ ನೋಟೀಸ್ ಜಾರಿ ಮಾಡಿದ್ದರು. ನಂತರ ಅವರನ್ನು ಮತ್ತು ಇತರ ಇಬ್ಬರು ಅಮಾಯಕರನ್ನು ಸುಳ್ಳು ಪ್ರಕರಣಗಳ ಅಡಿಯಲ್ಲಿ ಬಂಧಿಸಿತ್ತು.

ಇತ್ತೀಚಿನ ದಿನಗಳಲ್ಲಿ, ದುಷ್ಟ ಯೋಜನೆಗಳ ಪ್ರಕಾರ ಮತ್ತು ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎನ್.ಐ.ಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ನಂತರ ಇದನ್ನು ಒಂದು ಭಯೋತ್ಪಾದನಾ ಪ್ರಕರಣವಾಗಿ ಬದಲಿಸಿತು. ಅಬ್ದುಲ್ ಖಾದಿರ್ ವೃತ್ತಿಯಲ್ಲಿ ದಶಕಗಳಿಂದ ಮಾರ್ಷಲ್ ಆರ್ಟ್ಸ್ ತರಬೇತುದಾರರಾಗಿದ್ದಾರೆ ಮತ್ತು ರಾಜ್ಯಾದ್ಯಂತ ತನ್ನ ಶಿಷ್ಯರಿಗೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ.  ಮುಸ್ಲಿಮರಾಗಿರುವ ಏಕೈಕ ಕಾರಣಕ್ಕಾಗಿ ಅವರನ್ನು ಗುರಿಪಡಿಸಲಾಗುತ್ತಿದೆ. ತನಿಖೆಯನ್ನು ಎನ್.ಐ.ಎಗೆ ಒಪ್ಪಿಸಿರುವುದು ಗೃಹ ಸಚಿವಾಲಯದ ಒಂದು ರಾಜಕೀಯ ಆಟವಷ್ಟೇ ಆಗಿದ್ದು, ಇದರ ಹಿಂದೆ ತೆಲಂಗಾಣದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲಿ ಬಹುಸಂಖ್ಯಾಕ ವರ್ಗದ ಓಟ್ ಬ್ಯಾಂಕನ್ನು ತುಷ್ಟೀಕರಿಸುವ ಉದ್ದೇಶವಿದೆ. ಈ ಒಟ್ಟು ಪ್ರಕರಣವು ಕೋಮು ಧ್ರುವೀಕರಣದ ಅಜೆಂಡಾದ ಮೇಲೆ ಆಧರಿತವಾಗಿದೆ ಎಂದು ಅವರು ಹೇಳಿದ್ದಾರೆ.

ಎನ್.ಐ.ಎ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಂಘಟನೆಯ ಅಮಾಯಕ ಸದಸ್ಯರನ್ನು ಗುರಿಪಡಿಸಲು ಈ ಸುಳ್ಳು ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಬಿಹಾರದಲ್ಲಿ ತನ್ನ ರಾಜಕೀಯ ಪ್ರಭುಗಳನ್ನು ತೃಪ್ತಿಪಡಿಸಲು ಪ್ರಯತ್ನಿಸಿದಂತೆಯೇ ಏಜೆನ್ಸಿ, ಸುಳ್ಳು ಪ್ರಕರಣಗಳನ್ನು ಸೃಷ್ಟಿಸಲು, ಅಮಾಯಕರನ್ನು ಸಿಲುಕಿಸಲು ಮತ್ತು ಭಯೋತ್ಪಾದನಾ ನಿರೂಪಣೆಯನ್ನು ರಚಿಸಲು ಅದೇ ಕಾರ್ಯವಿಧಾನವನ್ನು ಅನುಸರಿಸುತ್ತಿದೆ ಎಂದು ನಸರುದ್ದೀನ್ ಎಳಮರಂ ಹೇಳಿದ್ದಾರೆ.

ಈ ದಾಳಿ ಪ್ರಹಸನದ ಬಳಿಕ ಎನ್.ಐ.ಎ ಹೊರಡಿಸಿದ ಪತ್ರಿಕಾ ಪ್ರಕಟನೆ ಹಳೆಯ ಆರೋಪಗಳನ್ನು ಪುನರಾವರ್ತಿಸುವ ಹೊರತಾಗಿ ಬೇರೇನೂ ಅಲ್ಲ. ಬಿಹಾರವೇ ಆಗಿರಲಿ, ತೆಲಂಗಾಣವೇ ಆಗಿರಲಿ ವಾಸ್ತವವೆಂದರೆ, ಬಂಧನ ನಡೆಸುವ ಅಥವಾ ಯಾವುದೇ ತನಿಖೆಯ ಅಗತ್ಯ ಬೀಳುವ ಒಂದು ಸಣ್ಣ ಅಪರಾಧದ ಘಟನೆಯೂ ನಡೆದಿಲ್ಲ. ಎನ್.ಐ.ಎಯ ನಿರಾಧಾರ ವಾದಗಳು ಮತ್ತು ಈ ಪ್ರಕರಣವನ್ನು ನಿಗೂಢಗೊಳಿಸುವ ಏಕೈಕ ಉದ್ದೇಶ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸುವುದಾಗಿದೆ. ಜನತೆ ಇದನ್ನು ಅರಿಯ ತೊಡಗಿದ್ದಾರೆ.

ಇದು ಅಲ್ಪಸಂಖ್ಯಾತರ ಹಕ್ಕುಗಳ ಆಂದೋಲನವನ್ನು ದಮನಿಸುವ ಅಧಿಕಾರದ ಕ್ರೂರ ದುರ್ಬಳಕೆಯಾಗಿದೆ. ಪಾಪ್ಯುಲರ್ ಫ್ರಂಟ್, ಈ ರೀತಿಯ ಬೆದರಿಕೆ ತಂತ್ರಗಳ ಮುಂದೆ ತಲೆಬಾಗುವ ಅಥವಾ ತನ್ನ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳುವಂತಹ ಸಂಘಟನೆಯೇನಲ್ಲ ಎಂದು ಅವರು ತಿಳಿಸಿದ್ದಾರೆ.

ನ್ಯಾಯದ ನಮ್ಮ ಧ್ವನಿ ಮುಂದುವರಿಯಲಿದೆ. ಸಂಘಟನೆಯು ದೇಶದ ಜನತೆಯ ಮುಂದೆ ವಾಸ್ತವವನ್ನು ಮುಕ್ತವಾಗಿ ತೆರೆದಿಡಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version