Home ಟಾಪ್ ಸುದ್ದಿಗಳು ಅಣಬೆ ಫ್ಯಾಕ್ಟರಿ ವಿರುದ್ಧ ಧ್ವನಿ ಎತ್ತಿದ ಸಂತ್ರಸ್ತರಿಗೆ ಪೊಲೀಸ್ ನೋಟಿಸ್: ಎಸ್ಡಿಪಿಐ ಖಂಡನೆ

ಅಣಬೆ ಫ್ಯಾಕ್ಟರಿ ವಿರುದ್ಧ ಧ್ವನಿ ಎತ್ತಿದ ಸಂತ್ರಸ್ತರಿಗೆ ಪೊಲೀಸ್ ನೋಟಿಸ್: ಎಸ್ಡಿಪಿಐ ಖಂಡನೆ

ಮಂಗಳೂರು : ವಾಮಂಜೂರಿನ ಜನವಸತಿ ಪ್ರದೇಶದಲ್ಲಿರುವ ಅಣಬೆ ಕಾರ್ಖಾನೆ ವಿರುದ್ಧ ಧ್ವನಿ ಎತ್ತಿ, ಪ್ರತಿಭಟನೆ ನಡೆಸಿ, ಮಾಧ್ಯಮಗಳ ಮುಂದೆ ಮಾತನಾಡಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ಕು ಮಂದಿ ಸ್ಥಳೀಯ ನಿವಾಸಿಗಳಿಗೆ ಸೈಬರ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಪೊಲೀಸರ ಈ ಕ್ರಮದ ವಿರುದ್ಧ ಎಸ್ಡಿಪಿಐ ಖಂಡನೆ ವ್ಯಕ್ತಪಡಿಸಿದೆ. ಅಣಬೆ ಫ್ಯಾಕ್ಟರಿಯ ಮಾಲಕರಾದ ಮಾಜಿ ಶಾಸಕ ಜೆ.ಆರ್. ಲೋಬೋ ರವರು ಸಂತ್ರಸ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಭಯಪಡಿಸಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದಾರೆ ಎಂದು ಎಸ್’ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ದೂರಿದ್ದಾರೆ.


ಸ್ಥಳೀಯ ಆಶ್ರಯ ಕಾಲೋನಿ ನಿವಾಸಿಗಳಾದ ಕಾರ್ನಿನ್ ಲೋಬೊ, ನಸೀಮಾ ಬಾನು, ಶ್ರೀಕಾಂತ್ ಮತ್ತು ಲಕ್ಷ್ಮಣ್ ಎಂಬರಿಗೆ ನೋಟಿಸ್ ನೀಡಿರುವ ಸೈಬರ್ ಪೊಲೀಸರು, ಮೂರು ದಿನಗಳ ಒಳಗಾಗಿ ಮಂಗಳೂರಿನ CEN ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪೊಲೀಸರು ನವೆಂಬರ್ 11ರಂದು ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 14ರಂದು ನೋಟಿಸ್ ತಲುಪಿದೆ.ಅಣಬೆ ಕಾರ್ಖಾನೆ ಮಾಲೀಕರಾಗಿರುವ ಮಾಜಿ ಶಾಸಕ ಜೆ.ಆರ್ ಲೋಬೋ ಅವರ ದೂರಿನ ಮೇರೆಗೆ ಎಫ್’ಐಆರ್ ದಾಖಲಿಸಿರುವ ಸೈಬರ್ ಪೊಲೀಸರು ಆಶ್ರಯ ಕಾಲೋನಿಯ ನಾಲ್ಕು ಮಂದಿಗೆ ಈ ನೋಟಿಸ್ ನೀಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದನ್ನು ಸುಳ್ಳು ಪ್ರಕರಣಗಳ ಮೂಲಕ ದಮನಿಸುವುದಾದರೆ ಮುಂದಿನ ದಿನಗಳಲ್ಲಿ ಇನ್ನೂ ತೀವ್ರವಾಗಿ ಹೋರಾಟ ನಡೆಸಲು ನಾಗರಿಕರು ತಯಾರಾಗಿದ್ದಾರೆ ಎಂದು ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಸ್ಪಷ್ಟ ನಿಲುವು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


Join Whatsapp
Exit mobile version