ಮಂಗಳೂರು: ಕರಾವಳಿ ಕರ್ನಾಟಕ ಮತ್ತು ಉಡುಪಿ ಜಿಲ್ಲೆಯ ಜನರನ್ನು ಭಯಭೀತಗೊಳಿಸಿದ ನೇಜಾರಿನ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಕೊಲೆಗೈದ ಪ್ರಕರಣದಲ್ಲಿ ಪೊಲೀಸರ ಕಾರ್ಯಾಚರಣೆಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್ ಕೆಕೆ ಶ್ಲಾಘಿಸಿದ್ದಾರೆ. ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿದ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ನೇತೃತ್ವದ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಅವರು ಹೇಳಿದ್ದಾರೆ. ಪೊಲೀಸರ ಈ ಕಾರ್ಯ ಸಫಲತೆಗೆ ವಿಶೇಷ ಅಭಿನಂದನೆಗಳನ್ನೂ ದ.ಕ. & ಉಡುಪಿ ಜಿಲ್ಲಾ ಜಮೀಯತುಲ್ ಫಲಾಹ್ ಅಧ್ಯಕ್ಷರೂ ಆದ ಶಾಹುಲ್ ಹಮೀದ್ ಹೇಳಿದ್ದಾರೆ.
ಉಡುಪಿ ಪೊಲೀಸರ ಕಾರ್ಯವೈಖರಿಯು ಪೊಲೀಸರ ಮೇಲೆ ಜನರಿಗೆ ಇರುವ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈ ಪ್ರಕರಣವನ್ನು ವಿಶೇಷ ನ್ಯಾಯಾಲಯದ ಮೂಲಕ ತ್ವರಿತವಾಗಿ ಮುಗಿಸಿ ಅಪರಾಧಿಗೆ ಕಠಿಣ ಶಿಕ್ಷೆ ನೀಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹವನ್ನೂ ಮಾಡಿದ್ದಾರೆ.