ನವದೆಹಲಿ: ಹಣದುಬ್ಬರ ಮತ್ತು ನಿರುದ್ಯೋಗವು ಏಕೆ ಉತ್ತುಂಗದಲ್ಲಿದೆ ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಲೇಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ , ಹಣದುಬ್ಬರವು 35 ವರ್ಷಗಳ ಗರಿಷ್ಠ ಮಟ್ಟಕ್ಕೆ ಏಕೆ ಇದೆ? ನಿರುದ್ಯೋಗವು 45 ವರ್ಷಗಳ ಗರಿಷ್ಠ ಮಟ್ಟದಲ್ಲಿ ಏಕೆ ಇದೆ? ಪರೋಟ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಲು ಕಾರಣವೇನು? ಕೃಷಿ ಟ್ರ್ಯಾಕ್ಟರ್ ಗಳಿಗೆ 12% ಜಿಎಸ್ಟಿ ತೆರಿಗೆ ವಿಧಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯು ನಿಮಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ, ಪ್ರಧಾನ ಮಂತ್ರಿಯವರೇ, ನೀವು ಉತ್ತರಿಸಬೇಕಾಗುತ್ತದೆ ಎಂದರು.
ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೊರಟಿರುವ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಕಾಂಗ್ರೆಸ್ ನಾಯಕ ಪ್ರಸ್ತುತ ಕರ್ನಾಟಕದಲ್ಲಿದ್ದಾರೆ.