ಭೋಪಾಲ್: ಮಧ್ಯಪ್ರದೇಶದ ಕೃಷಿ ಸಚಿವ ಮತ್ತು ಬಿಜೆಪಿ ನಾಯಕ ಕಮಲ್ ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು “ದೇವರ ಅವತಾರ” ಎಂದು ಬಣ್ಣಿಸಿ ಅಪಹಾಸ್ಯಕೀಡಾಗಿದ್ದಾರೆ.
“ದುಷ್ಕೃತ್ಯಗಳು” ಹೆಚ್ಚಾದಾಗ ರಾಮ ಮತ್ತು ಕೃಷ್ಣನಂತಹವರು ಕ್ರೌರ್ಯವನ್ನು ಕೊನೆಗೊಳಿಸಲು ಜನ್ಮವೆತ್ತುತ್ತಾರೆ. ಕಾಂಗ್ರೆಸ್, ಭ್ರಷ್ಟಾಚಾರ ಮತ್ತು ದೇಶದ ಸಂಸ್ಕೃತಿಯನ್ನು ನಾಶ ಮಾಡಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಹರ್ದಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್, “ಭಾರತದ ಮೇಲೆ ಯಾವುದೇ ಬಿಕ್ಕಟ್ಟು ಮತ್ತು ದೌರ್ಜನ್ಯ ಹೆಚ್ಚಾದಾಗ, ದೇವರು ಮಾನವ ರೂಪದಲ್ಲಿ ಅವತಾರವನ್ನು ಪಡೆದುಕೊಳ್ಳುತ್ತಾನೆ ಎಂದು ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹೇಳಲಾಗುತ್ತದೆ” ಎಂದು ಹೇಳಿದರು.
“ಅಂತೆಯೇ, ಕಾಂಗ್ರೆಸ್ ನ ದೌರ್ಜನ್ಯಗಳು ಹೆಚ್ಚಾದಾಗ… ಭ್ರಷ್ಟಾಚಾರ, ಜಾತೀಯತೆ ಹೆಚ್ಚಾದಾಗ, ದೇಶದ ಸಂಸ್ಕೃತಿ ನಾಶವಾಯಿತು ಮತ್ತು ಹತಾಶೆಯ ವಾತಾವರಣವು ಎಲ್ಲೆಡೆ ಚಾಲ್ತಿಯಲ್ಲಿದೆ, ಅದನ್ನು ಕೊನೆಗೊಳಿಸಲು ನರೇಂದ್ರ ಮೋದಿ ಜನಿಸಿದರು,” ಎಂದು ಪಟೇಲ್ ಬಣ್ಣಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ಗುರು ಆಗುತ್ತಿದೆ ಮತ್ತು ಸಾಮಾನ್ಯ ಜನರ ಕಲ್ಯಾಣವನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.