Home ಟಾಪ್ ಸುದ್ದಿಗಳು ಗಣರಾಜ್ಯ ದಿನದ ಸ್ತಬ್ಧ ಚಿತ್ರ ನಿರಾಕರಿಸಿದ್ದು ದಿಗ್ಭ್ರಮೆ ಮೂಡಿಸಿದೆ: ಮಮತಾ ಬ್ಯಾನರ್ಜಿ

ಗಣರಾಜ್ಯ ದಿನದ ಸ್ತಬ್ಧ ಚಿತ್ರ ನಿರಾಕರಿಸಿದ್ದು ದಿಗ್ಭ್ರಮೆ ಮೂಡಿಸಿದೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಜನವರಿ 26, 2022ರ ಗಣರಾಜ್ಯ ದಿನ ಇಲ್ಲವೇ ಪ್ರಜಾಪ್ರಭುತ್ವ ದಿನದ ಮೆರವಣಿಗೆಗೆ ಪಶ್ಚಿಮ ಬಂಗಾಳ ಸೂಚಿಸಿದ ಸ್ತಬ್ಧ ಚಿತ್ರವನ್ನು ಕಾರಣ ನೀಡದೆ ನಿರಾಕರಿಸಿದ್ದನ್ನು ಕಂಡು ದಿಗ್ಭ್ರಮೆಗೊಂಡಿದ್ದೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.


ಸುಭಾಷ್ ಚಂದ್ರ ಬೋಸ್ ಅವರ 150ನೇ ವರುಷಾಚರಣೆ ಮತ್ತು ಅವರ ಆಜಾದ್ ಹಿಂದ್ ಸೇನೆಯ ಬಗ್ಗೆ ಈ ಬಾರಿಯ ಟ್ಯಾಬ್ಲೋ ರೂಪಿಸಲಾಗಿತ್ತು ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ.
ಗಣರಾಜ್ಯ ದಿನದ ಮೆರವಣಿಗೆಯಲ್ಲಿ 21 ಸ್ತಬ್ಧ ಚಿತ್ರಗಳು ಇರಲಿದ್ದು ಅವುಗಳಲ್ಲಿ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾದರೆ ಉಳಿದ 9 ಕೇಂದ್ರ ಸರಕಾರ ಮತ್ತು ನಾನಾ ಸ್ವತಂತ್ರ ಸಂಸ್ಥೆಗಳಿಗೆ ಸೇರಿದ ನಾನಾ ಇಲಾಖೆಗಳಿಗೆ ಸೇರಿದವುಗಳಾಗಿರುತ್ತವೆ.


ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರ ಒಂದೇ ಅಲ್ಲ, ಕೇರಳದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಸಹ ನಿರಾಕರಿಸಲಾಗಿದೆ. ಇಲ್ಲಿ ಸುಭಾಷ್ ಚಂದ್ರ ಬೋಸ್ ಬಗೆಗಿನ ಟ್ಯಾಬ್ಲೋ ಆಯ್ಕೆಯೇ ಆಗಿರಲಿಲ್ಲ. ನಾರಾಯಣ ಗುರುಗಳ ಸ್ತಬ್ಧ ಚಿತ್ರವು ಆಯ್ಕೆಯಾಗಿದ್ದು, ಕೊನೆಯ ಕ್ಷಣದಲ್ಲಿ ನಿರಾಕರಿಸಲಾಗಿದೆ. ಅಷ್ಟೇ ಅಲ್ಲ ಶಂಕರಾಚಾರ್ಯರ ಸ್ತಬ್ಧ ಚಿತ್ರವನ್ನು ಕೇಳಲಾಗಿದೆ ಎಂಬ ವರದಿಯೂ ಇದೆ. ರಕ್ಷಣಾ ಸಚಿವಾಲಯವು ಗಣರಾಜ್ಯ ದಿನದ ಮೆರವಣಿಗೆಯ ಜವಾಬ್ದಾರಿಯದಾಗಿದ್ದು, ಟ್ಯಾಬ್ಲೋ ಆಯ್ಕೆ ಪ್ರಕ್ರಿಯೆಯು ಆ ಇಲಾಖೆಯಿಂದಲೆ ಆಗುತ್ತದೆ. ಅಲ್ಲಿ ಅದಕ್ಕೆಂದು ಒಂದು ತಜ್ಞರ ಸಮಿತಿ ರಚಿಸಲಾಗಿರುತ್ತದೆ.
ವಿಷಯ ವಿವಾದಕ್ಕೀಡಾದಾಗ ಮತ್ತು ಅದರಲ್ಲಿ ರಾಜಕೀಯ ಇರುವುದು ಹೊರಬಿದ್ದಾಗ ಸಂಬಂಧಿಸಿದ ಸಮಿತಿಯ ಕ್ರಿಶನ್ ಕೌಶಿಕ್ ಹೇಗೆ ಟ್ಯಾಬ್ಲೋ ವಿನ್ಯಾಸ ಆಗುತ್ತದೆ ಮತ್ತು ಆಯ್ಕೆ ಆಗುತ್ತದೆ ಎನ್ನುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಕ್ಷಣಾ ಸಚಿವಾಲಯವು ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ, ಕೇಂದ್ರ ಸರಕಾರೀ ಇಲಾಖೆಗಳಿಗೆ, ಸಂವಿದಾನಾತ್ಮಕ ಸ್ವತಂತ್ರ ಸಂಸ್ಥೆಗಳಿಗೆ ಗಣರಾಜ್ಯ ದಿನದ ಪೆರೇಡ್ ಬಗ್ಗೆ, ಅದರಲ್ಲಿ ಭಾಗವಹಿಸುವ ಬಗ್ಗೆ ಪತ್ರ ಬರೆಯುತ್ತದೆ.


ರಕ್ಷಣಾ ಸಚಿವಾಲಯವು 80 ಕೇಂದ್ರ ಸಚಿವರಿಗೆ, ಅವರ ಇಲಾಖೆಗಳಿಗೆ, ಎಲ್ಲ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ, ಅಲ್ಲಿನ ಕಾರ್ಯದರ್ಶಿಗಳಿಗೆ, ಚುನಾವಣಾ ಆಯೋಗ ಮತ್ತು ನೀತಿ ಆಯೋಗಕ್ಕೆ ಗಣರಾಜ್ಯ ದಿನದ ಪೆರೇಡ್ ನಲ್ಲಿ ಭಾಗವಹಿಸುವಂತೆ ಈ ಬಾರಿ ಸೆಪ್ಟೆಂಬರ್ 16ರಂದು ಪತ್ರ ಬರೆದಿತ್ತು. ಪತ್ರದ ಒಕ್ಕಣೆಯು ಈ ವರುಷದ ಗಣರಾಜ್ಯ ದಿನದ ಪೆರೇಡ್ ನಲ್ಲಿ ಭಾಗವಹಿಸುವಂತೆ ಹಾಗೂ ಟ್ಯಾಬ್ಲೋಗಳ ಬಗೆಗೂ ಪತ್ರದಲ್ಲಿ ಇರುತ್ತದೆ.
ಪತ್ರ ಪಡೆದವರಿಂದ ಸೆಪ್ಟೆಂಬರ್ 27ರಿಂದ ಪ್ರಸ್ತಾವನೆಗಳು ಬರುತ್ತವೆ. ಅಕ್ಟೋಬರ್ ಎರಡನೆಯ ವಾರದಲ್ಲಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಇಲಾಖೆಗಳು ಅವರಿಗೆ ಸಂಬಂಧಿಸಿದಂತೆ ಒಂದು ಧ್ಯೇಯದ, ತತ್ವದ ಟ್ಯಾಬ್ಲೋ ಮಾದರಿಯನ್ನು ಸೂಚಿಸುತ್ತವೆ. ಈ ಬಾರಿ ರಕ್ಷಣಾ ಸಚಿವಾಲಯವು ಸ್ವಾತಂತ್ರ್ಯೋತ್ಸವದ 75 ವರುಷಗಳ ವಿಷಯ ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ 75ರಲ್ಲಿ ಭಾರತ, ಸ್ವಾತಂತ್ರ್ಯ ಹೋರಾಟ, 75ರ ಕಲ್ಪನೆ ಮಾದರಿಗಳು, 75ರ ಸಾಧನೆಗಳು, 75ರ ಕ್ರಿಯೆಗಳು, 75ರ ಪರಿಹಾರಗಳು ಇತ್ಯಾದಿಯನ್ನೂ ಈ ವಿಷಯಕ್ಕೆ ಲಗತ್ತಿಸಲಾಗಿತ್ತು.
ಟ್ಯಾಬ್ಲೋಗಳು ಏನನ್ನೆಲ್ಲ ಒಳಗೊಳ್ಳಬೇಕು ಎಂಬ ಬಗೆಗೂ ರಕ್ಷಣಾ ಇಲಾಖೆಯು ಮೂಲಭೂತ ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿರುತ್ತದೆ. ಪಾಲ್ಗೊಳ್ಳುವ ಟ್ಯಾಬ್ಲೋಗಳು ಅರ್ಹ ವಿನ್ಯಾಸಕಾರರಿಂದ, ಪ್ರಸಿದ್ಧ ಸಂಸ್ಥೆಗಳಿಂದ ವಿನ್ಯಾಸಗೊಳ್ಳಬೇಕು. ಸ್ಪಷ್ಟವಾದ ಎದ್ದು ಕಾಣುವ ರಚನೆ, ವಿದ್ಯುನ್ಮಾನ ತೋರು ಹಲಗೆಗಳು, ಯಂತ್ರ ಚಾಲಿತ ರೋಬೋ ಬಳಕೆ, ದಿಟಸಮ ವಿನ್ಯಾಸಗಳು, ವಿಶೇಷ ಪರಿಣಾಮದ ದೃಶ್ಯಗಳು ಇತ್ಯಾದಿಗಳ ಮೂಲಕ ಟ್ಯಾಬ್ಲೋ ಮೌಲ್ಯ ವರ್ಧನೆ ಬಗೆಗೆ ಸೂಚನೆ ಇರುತ್ತದೆ.
ದೇಶದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರಾತಿನಿಧ್ಯದ ಟ್ಯಾಬ್ಲೋಗಳು ದೇಶದ ವಿವಿಧತೆಯನ್ನು ಬಿಂಬಿಸುವಂತಿರಬೇಕು.
ಟ್ಯಾಬ್ಲೋ ಯಾವ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಇಲಾಖೆಗೆ ಸೇರಿದೆ ಎನ್ನುವುದರ ಹೊರತು ಟ್ಯಾಬ್ಲೋದಲ್ಲಿ ಯಾವುದೇ ಬರಹ, ಲೋಗೋ ಇರಬಾರದು. ಪ್ರತಿನಿಧಿಸುವುದರ ಹೆಸರನ್ನು ಮುಂದೆ ಹಿಂದಿ, ಹಿಂದೆ ಇಂಗ್ಲಿಷ್ ಹಾಗೂ ಪಕ್ಕಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಬರೆದಿರಬೇಕು.
ಅದೇ ವೇಳೆ ಪ್ಲಾಸ್ಟಿಕ್ ನಂಥವನ್ನು ಬಳಸದೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಟ್ಯಾಬ್ಲೋ ರಚಿಸಬೇಕು ಎಂಬ ಸೂಚನೆಯನ್ನೂ ರಕ್ಷಣಾ ಇಲಾಖೆ ನೀಡುತ್ತದೆ.

Join Whatsapp
Exit mobile version