Home ಟಾಪ್ ಸುದ್ದಿಗಳು ಕೊರೋನಾ ಬದುಕಿನ ಸಂಕಟಗಳ ಚಿತ್ರ ಸಂಪುಟ: ಉತ್ಸಾಹಿ ಛಾಯಾಗ್ರಾಹಕ ಕೆ.ವೆಂಕಟೇಶ್ ಸೆರೆ ಹಿಡಿದ ಚಿತ್ರಗುಚ್ಛ

ಕೊರೋನಾ ಬದುಕಿನ ಸಂಕಟಗಳ ಚಿತ್ರ ಸಂಪುಟ: ಉತ್ಸಾಹಿ ಛಾಯಾಗ್ರಾಹಕ ಕೆ.ವೆಂಕಟೇಶ್ ಸೆರೆ ಹಿಡಿದ ಚಿತ್ರಗುಚ್ಛ

ಬೆಂಗಳೂರು; ಲೋಕದ ವಿದ್ಯಮಾನಗಳನ್ನು, ವಿಶೇಷವಾಗಿ ಜನಸಮುದಾಯಗಳ ಸಂಕಟ ವೇದನೆಗಳನ್ನು ತಮ್ಮ “ಮಾನವತಾವಾದಿ ಕ್ಯಾಮರಾ” ಕಣ್ಣಲ್ಲಿ ಕಾಣುವ ಮತ್ತು ನಮಗೆಲ್ಲಾ ಕಾಣಿಸುವ ಚಿರ ಉತ್ಸಾಹಿ ಕಂದವಾರ ವೆಂಕಟೇಶ್ (ಕೆ.ವೆಂಕಟೇಶ್) ಇದೀಗ ಕೊರೋನಾ ಬದುಕಿನ ಸಂಕಟಗಳನ್ನು ಕಟ್ಟಿಕೊಟ್ಟಿದ್ದಾರೆ.

ನಮಗೆಲ್ಲಾ ನಿತ್ಯ ಕಾಣುವ ಅನೇಕ ಸಂಗತಿಗಳು, ಸನ್ನಿವೇಶಗಳು ವೆಂಕಟೇಶ್ ಅವರ “ಮಾನವತಾವಾದಿ ಕ್ಯಾಮರಾ” ಕಣ್ಣು ಚೌಕದಲ್ಲಿ ಬಂಧಿಸಿದಾಗ ನಮಗೆ ಸಹಜ- ಸರಳ ಎನಿಸಿದ ಎಷ್ಟೋ ಸನ್ನಿವೇಶ- ಘಟನೆಗಳು ಅನನ್ಯವಾಗುತ್ತವೆ. ಹೌದು. ಇದೀಗ ಕೊರೊನಾ ಸಾಂಕ್ರಾಮಿಕವು ಜನ ಸಮುದಾಯಗಳ ಬದುಕಿನಲ್ಲಿ ತಂದೊಡ್ಡಿದ ಸಂಕಟಗಳನ್ನು ದಾಖಲಿಸಿ ನಮ್ಮೆದುರಿಗಿಟ್ಟಿದ್ದಾರೆ.

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಾರ್ಚ್ 14 ರಿಂದ 18 ರ ವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 7 ಗಂಟೆವರೆಗೆ ಛಾಯಾಚಿತ್ರಗಳ ಪ್ರದರ್ಶನವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಿ.ಎಲ್. ಶಂಕರ್ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ವೆಂಕಟೇಶ್ ಮೂಲತಃ ಚಿಕ್ಕಬಳ್ಳಾಪುರದ ಕಂದವಾರದವರು. ಇವರು ರಾಷ್ಟ್ರಮಟ್ಟದ ಮತ್ತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೂ ಛಾಯಾಚಿತ್ರಗಳನ್ನು ಒದಗಿಸುತ್ತಾರೆ. ಸುದ್ದಿ ಮಾಧ್ಯಮಗಳ ಒತ್ತಡದ ಕೆಲಸಗಳ ನಡುವೆಯೂ ವೆಂಕಟೇಶ್ ಅವರ “ಮಾನವತಾವಾದಿ ಕ್ಯಾಮರಾ” ಅನೇಕ ಸಂಗತಿಗಳನ್ನು ದೃಶ್ಯಕಾವ್ಯವಾಗಿಸಿಬಿಡುತ್ತದೆ. ಇಂಗ್ಲೀಷನಲ್ಲಿ ಒಂದು ಮಾತಿದೆ “ನೀನು ಸೆರೆಹಿಡಿದ ಫೋಟೋಗಳನ್ನು ತೋರಿಸು- ನೀನಾರೆಂಬುದನ್ನು ನಾನು ಹೇಳುವೆ” ಎನ್ನಬಹುದಾದರೆ ವೆಂಕಟೇಶ್ ಫೋಟೋಗಳು ಅವರನ್ನು ನಿಜ ಮಾನವತಾವಾದಿ ಎಂದು ನಮಗೆ ಮನನ ಮಾಡಿಕೊಡುತ್ತವೆ. ಇವರು ದಾಖಲಿಸಿರುವ ವಸ್ತು ವಿಷಯಗಳನ್ನೊಮ್ಮೆ ನೋಡಿದರೆ ಅವರೊಳಗಿನ ಅಪ್ಪಟ್ಟ ಮನಷ್ಯನ ದರ್ಶನವಾದೀತು.

ವೆಂಕಟೇಶ್ ಅವರ ವಿಶಿಷ್ಟ ಪ್ರದರ್ಶನಗಳ ಪಟ್ಟಿ ಇಲ್ಲಿದೆ ಔಟ್ ಆಫ್ ಫೋಕಸ್: ತಮಿಳುನಾಡಿನ ಪುಟ್ಟ ಊರು ಕೂವಗಂ. ಅಲ್ಲಿ ನಡೆಯುವ ಉತ್ಸವ ಪ್ರತಿ ವಸಂತ ಋತುವಿನಲ್ಲಿ ವಿಶ್ವದ ಗಮನ ಸೆಳೆಯುತ್ತದೆ. ಏಕೆಂದರೆ ಅಲ್ಲಿ ತೃತೀಯ ಲಿಂಗಿಗಳು ಸೇರುತ್ತಾರೆ, ಹಾಡಿ ಕುಣಿಯುತ್ತಾರೆ. ಸಮಾಜದ ಪರಿತ್ಯಕ್ತ ಭಾವನೆಯನ್ನು ಮರೆತು ಎಲ್ಲರೊಳಗೊಂದಾಗುತ್ತಾರೆ. ಈ ಕಾರ್ಯಕ್ರಮದ ಅಪರೂಪದ ನೋಟಗಳನ್ನು ಔಟ್ ಆಫ್ ಫೋಕಸ್ ಹೆಸರಿನ ಪ್ರದರ್ಶನದಲ್ಲಿ ತೆರೆದಿಟ್ಟಿದ್ದರು. ಮಾಡೆಲ್ ಬಿಯಾಂಡ್ ಜೆಂಡರ್: ತೃತೀಯ ಲಿಂಗಿಗಳು ಕೂಡಾ ತಮ್ಮ ಅನನ್ಯ ಸೌಂದರ್ಯದಿಂದ ಗಮನ ಸೆಳೆಯಬಲ್ಲರು. ಅವರು ರೂಪದರ್ಶಿಯರಾದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರೂಪದರ್ಶಿಯರ ಮಾರುಕಟ್ಟೆ ಕುಸಿಯಬಹುದೇನೋ ಎಂಬಂತಹ ಅಪರೂಪದ ಛಾಯಾಚಿತ್ರಗಳನ್ನು ವೆಂಕಟೇಶ್ ಸೆರೆಹಿಡಿದಿದ್ದರು. ಚಂದ್ರಶೇಖರ್ ಪಾಟೀಲ್‌ರಿಗೆ ಎಲ್ಲಾ ಬಣ್ಣದ ವಂದನೆಗಳು ವೇವ್ಸ್ ಆಫ್ ವೋಸ್: (ಸಂಕಷ್ಟದ ಅಲೆಗಳು) ಪತ್ರಿಕಾ ಛಾಯಾಗ್ರಾಹಕರಾಗಿ ಕೆ. ವೆಂಕಟೇಶ್ ಯಾವುದೇ ವಿಪತ್ತು ಸಂಭವಿಸಿದರೂ ಅಲ್ಲಿ ಅನಿವಾರ್ಯವೇನೋ ಎಂಬಂತೆ ಹಾಜರಾಗಿಬಿಡುತ್ತಾರೆ. ಸುನಾಮಿ ಅಲೆಯ ನಂತರ ದಕ್ಷಿಣ ಭಾರತದ ಕರಾವಳಿ ಭಾಗದಲ್ಲೆಲ್ಲಾ ಸಂಚರಿಸಿ ಸಾವು ನೋವುಗಳನ್ನು ದಾಖಲಿಸಿದ್ದರು.

ವಾಟರ್ ವೋಸ್: (ನೀರಿನ ಕಷ್ಟ) ಅಂತರ್ಜಲ ದಿನೇ ದಿನೇ ಬತ್ತಿ ಹೋಗುತ್ತಿದೆ. ಜನ ಜಾನುವಾರು ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬಹಳಷ್ಟು ನದಿಗಳು, ಕೆರೆಗಳು ಮತ್ತು ಬಾವಿಗಳನ್ನು ಒಳಗೊಂಡಿದ್ದ ಕರ್ನಾಟಕದಲ್ಲಿ ಹಲವು ಶತಮಾನಗಳ ಜೀವನದಿಗಳು ಬತ್ತಿಹೋಗಿವೆ. ವಾಟರ್ ವೋಸ್ ಈ ಗಂಭೀರ ಪರಿಸ್ಥಿತಿಯನ್ನು ನಮ್ಮೆದುರಿಗಿಟ್ಟಿತ್ತು.

ಪನೋರಮಾ ಆಫ್ ಗೊಮ್ಮಟೇಶ್ವರ: ಪ್ರತಿ 12 ವರ್ಷಗಳಿಗೊಮ್ಮೆ ಜೈನರ ಯಾತ್ರಾಸ್ಥಳ ಶ್ರವಣಬೆಳಗೊಳಕ್ಕೆ ವಿಶ್ವದೆಲ್ಲೆಡೆಯಿಂದ ಭಕ್ತರು ಹರಿದುಬರುತ್ತಾರೆ. ಅಂದು ಗೊಮ್ಮಟೇಶ್ವರನಿಗೆ ಮಹಾ ಮಸ್ತಕಾಭಿಷೇಕ ನಡೆಯುತ್ತದೆ. ಅಂಥದೊಂದು ಅಪರೂಪದ ಕಾರ್ಯಕ್ರಮವನ್ನು ಸೆರೆಹಿಡಿದಿದ್ದರು.

ಅಲಂಕಾರಿಕ ಆಭರಣಗಳ ಸಂಪತ್ತು: ಉತ್ತರ ಕನ್ನಡದ ಹಾಲಕ್ಕೆ ವಕ್ಕಲಿಗ ಮಹಿಳೆಯರು ಧರಿಸಿದ ಅಲಂಕಾರಿಕ ಆಭರಣಗಳು, ಅವರ ಕುಶಲತೆ ಮತ್ತು ಅವರ ಜಾನಪದವನ್ನು ಪ್ರತಿನಿಧಿಸುವ ಅಪರೂಪದ ಚಿತ್ರಗಳು.

ಬ್ಯಾನ್ಯನ್ ಕ್ಲಾನ್: ಅವಿಭಕ್ತ ಕುಟುಂಬಗಳು ವಿರಳವಾಗುತ್ತಿರುವ ಈ ಸಂದರ್ಭದಲ್ಲಿ 180 ಸದಸ್ಯರ ನರಸಿಂಗನವರ್ ಕುಟುಂಬ ಅನನ್ಯವಾಗಿದೆ. ಆ ಕುಟುಂಬದ ಚಿತ್ರಣ ಕಟ್ಟಿಕೊಟ್ಟಿದ್ದರು ವೆಂಕಟೇಶ್. ಗ್ರೇಟ್‌ಫುಲ್ ಡೆಡ್: ಪ್ರತಿವರ್ಷ ಬೆಂಗಳೂರಿನಲ್ಲಿ ನೂರಾರು ಮಂದಿ ಅನಾಥರಂತೆ ಸಾಯುತ್ತಾರೆ. 21 ವರ್ಷದ ಪ್ರವೀಣ್ ಕುಮಾರ್ ಇಂತಹ ಅನಾಥ ಶವಗಳ ಬಂಧು. ಅವರ ಅಂತಿಮ ಯಾತ್ರೆಯನ್ನು ನಡೆಸಿ ಸಂಸ್ಕಾರ ಮಾಡುವ ಇಂತಹ ಮಾನವೀಯ ವ್ಯಕ್ತಿಯ ಅನಾವರಣ ಮಾಡಿದ್ದಾರೆ.

ಬ್ಯೂಟಿ ಅಂಡ್ ಬಿಹೋಲ್ಡರ್: ಕರ್ನಾಟಕದ ಐತಿಹಾಸಿಕ ನಗರಿ ಬೀದರ್. ಪರ್ಷಿಯನ್ ಕವಿ ಅಬ್ದುಲ್ ರೆಹಮಾನ್ ಜಾಮಿ ತನ್ನ ‘ಲೈಲಾ ಮಜ್ನು’ವಿನಲ್ಲಿ ರೋಮ್ ನಗರವನ್ನು ನಾಚಿಸಬಲ್ಲ ನಗರ ಎಂದು ಬೀದರ್ ಅನ್ನು ಕರೆದಿದ್ದಾನೆ. ಈ ನಗರದ ಅನನ್ಯವಾದ ನೋಟಗಳನ್ನು ವೆಂಕಟೇಶ್ ಕಟ್ಟಿಕೊಟ್ಟಿದ್ದಾರೆ. 8ನೇ ಅದ್ಭುತ: ಹಂಪಿ ಕರ್ನಾಟಕದ ಅಪರೂಪದ ಸ್ಮಾರಕಗಳ ಕೇಂದ್ರ. ನಿಕೊಲೊ ಕಾಂಟಿ, ಕರ್ನಲ್ ಮೆಕಿಂಜೆಯಿಂದ ಜಾಕಿ ಚಾನ್ವ ರೆಗೆ ಬಹುತೇಕರನ್ನು ಸೆಳೆದಿದೆ. ಎಲ್ಲೂ ನೋಡದ ಹಂಪಿಯ ಚಿತ್ರಗಳು ಈ ಪ್ರದರ್ಶನದಲ್ಲಿದ್ದವು. ಇವರ ಕೆಲಸಗಳಲ್ಲಿ ಭಿನ್ನಲಿಂಗಿಗಳ ಕ್ಯಾಲೆಂಡರ್ ಭಾರತದಲ್ಲಿಯೇ ವಿನೂತನವಾಗಿದೆ. ಭಿನ್ನಲಿಂಗಿಗಳ ಕುರಿತಾದ ಛಾಯಾಗ್ರಹಣವನ್ನು ಅತ್ಯಂತ ವಿಶೇಷಾಗಿ ಮಾಡಿದ್ದಾರೆ. ಇಂಥ ಅಪರೂಪದಲ್ಲಿ ಅಪರೂಪವೆನ್ನಬಹುದಾದ ವೆಂಕಟೇಶ್ ಅವರು ಫೋಟೋಗ್ರಾಫರ್ಸ್ ಸಮುದಾಯ ಹೆಮ್ಮೆ ಪಡುವಂತ ಕೆಲಸ ಮಾಡುತ್ತಾ ಲೋಕದ ಗಮನ ಸೆಳೆದು ಅಭಿನಂದನಾರ್ಹರಾಗಿದ್ದಾರೆ.

Join Whatsapp
Exit mobile version