Home ಕರಾವಳಿ ಮಂಗಳೂರು: ಕರಾವಳಿಯಲ್ಲಿ ಕೆಂಡದಂತ ಬಿಸಿಲು, ಸೆಕೆಗೆ ಜನ ಹೈರಾಣ

ಮಂಗಳೂರು: ಕರಾವಳಿಯಲ್ಲಿ ಕೆಂಡದಂತ ಬಿಸಿಲು, ಸೆಕೆಗೆ ಜನ ಹೈರಾಣ

ಮಂಗಳೂರು: ಮಾರ್ಚ್ ತಿಂಗಳು ಆರಂಭವಾಗುತ್ತಲೇ ಕರಾವಳಿಯಲ್ಲಿ ಬಿಸಿಲ ಬೇಗೆ ಹೆಚ್ಚಾಗಿದ್ದು, ಸೆಕೆಗೆ ಜನ ಹೈರಾಣಾಗಿದ್ದಾರೆ.
ಈ ವರ್ಷದ ಬೇಸಿಗೆಯಲ್ಲಿ ಬೀಸುವ ಬಿಸಿ ಗಾಳಿ ಅಪಾಯವನ್ನು ಹೊಂದಿಲ್ಲ. ಜನರು ಬೇಸಿಗೆಯ ಬಗ್ಗೆ ಸ್ಪಲ್ಪ ಜಾಗೃತೆ ವಹಿಸುವಂತೆ ಬೆಂಗಳೂರು ಹವಾಮಾನ ಇಲಾಖೆಯ ಅಧಿಕಾರಿ ಡಾ. ಎಸ್.ಎಂ. ಗವಾಸ್ಕರ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಕಳೆದ ಹಲವು ದಿನಗಳಿಂದ ಮುಂಜಾನೆ ಮಂಜು ಕವಿದಿರುತ್ತದೆ. ಬುಧವಾರ ಬೆಳಿಗ್ಗೆ ಮಳೆಯೂ ಸುರಿದಿದೆ. ಆದರೆ ಸೂರ್ಯ ನೆತ್ತಿಗೇರುತ್ತಿದ್ದಂತೆ, ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಬೆವರಿಳಿಸಿ ಬಿಡುತ್ತದೆ.

ಸದ್ಯ ಮಂಗಳೂರಿನಲ್ಲಿ ತಾಪಮಾನವು ಗರಿಷ್ಟ 33 ಡಿಗ್ರಿ ಮತ್ತು ಕನಿಷ್ಠ 25 ಡಿಗ್ರಿ ಹೊಂದಿದೆ. ಮಾರ್ಚ್ 15 ರ ಬಳಿಕ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ ಗರಿಷ್ಠ 34 ಮತ್ತು ಕನಿಷ್ಟ 26 ಕ್ಕೆ ಏರಲಿದೆ.

ಬಿಸಿಲ ಬೇಗೆಗೆ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪರೀಕ್ಷೆ, ಫಲಿತಾಂಶ ಮುಗಿಸಿ ಮುಂದಿನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಿದೆ. ಕಟ್ಟಡ, ಕೂಲಿ ಕಾರ್ಮಿಕರು, ಸೆಂಟ್ರಿಂಗ್ ಕಾರ್ಮಿಕರು ಸೇರಿದಂತೆ ಹೊರಾಂಗಣ ಕಾರ್ಮಿಕರು ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದಾರೆ. ಜಿಲ್ಲೆಗೆ ಪ್ರವಾಸ ಬಂದವರು ಆದಷ್ಟು ಬೇಗ ಊರು ಸೇರಲು ಚಿಂತನೆ ನಡೆಸುತ್ತಿದ್ದಾರೆ.

ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಕಂಡುಬರುತ್ತಿದೆ. ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದ ವರೆಗೂ ಮುಂದುವರೆಯುವ ಸಾಧ್ಯತೆ ಇದೆ.

ವಯಸ್ಕರು, ಮಕ್ಕಳು, ವಯೋವೃದ್ಧರು ಬೇಸಿಗೆಯಲ್ಲಿ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳುವುದು ಅಗತ್ಯ.
ಬಿಸಿಲಿನಲ್ಲಿ ಹೊರ ಹೋಗುವಾಗ ಬಿಳಿ ಬಣ್ಣದ ಛತ್ರಿಯನ್ನು ಬಳಸುವಂತೆ, ಬಿಸಿಲಿನ ಪ್ರಖರತೆ ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸದಂತೆ ತಜ್ಞರು ಸಲಹೆ ನೀಡಿದ್ದಾರೆ.

ಕಾಟನ್ ಬಟ್ಟೆಗಳನ್ನು ಧರಿಸುವಂತೆ, ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ. ಬಿಸಿಲಿನಲ್ಲಿ ವಿಟಮಿನ್ “ಸಿ” ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿಸಕ್ಕರೆ ಬದಲು ಬೆಲ್ಲವನ್ನು ಬಳಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Join Whatsapp
Exit mobile version