ಕಡಲೂರು: ರೈಲ್ವೆ ಹಳಿ ದಾಟುತ್ತಿದ್ದ ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಗುದ್ದಿದ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ರೈಲ್ವೆ ಕ್ರಾಸಿಂಗ್ ಬಳಿ ನಿಯೋಜನೆಗೊಂಡಿದ್ದ ಗೇಟ್ ಕೀಪರ್‌ಅನ್ನು ಪ್ರಶ್ನಿಸಿರುವ ದಕ್ಷಿಣ ರೈಲ್ವೆ, ಆತನನ್ನು ಅಮಾನತುಗೊಳಿಸಿದ್ದು, ದುರಂತಕ್ಕೆ ಕ್ಷಮೆಯಾಚಿಸಿದೆ.
ಮಂಗಳವಾರ ಬೆಳಿಗ್ಗೆ 7.45ರ ಹೊತ್ತಿಗೆ ಕಡಲೂರು ಮತ್ತು ಅಲಪ್ಪಕ್ಕಮ್ ನಡುವಿನ ಗೇಟ್ ಸಂಖ್ಯೆ 170ರಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾವಾಹನ ದಾಟುವಾಗ ವಿಲ್ಲುಪುರಂ–ಮೈಲಾಡುತುರೈ(ರೈಲು ಸಂಖ್ಯೆ 56813) ರೈಲು ಗುದ್ದಿದೆ. ಪರಿಣಾಮ ಹಳಿಯಿಂದ ತುಸು ದೂರಕ್ಕೆ ಹೋಗಿ ಶಾಲಾವಾಹನ ಪಲ್ಟಿಯಾಗಿದೆ.
ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕಲಾಗಿತ್ತು, ಆದರೆ ಶಾಲೆಯನ್ನು ತಲುಪುದು ತಡವಾಗುತ್ತದೆ ಎಂದು ಹೇಳಿ ಶಾಲಾ ವಾಹನದ ಚಾಲಕ ಅಲ್ಲಿದ್ದ ಸಿಬ್ಬಂದಿಯಿಂದ ಗೇಟ್ ತೆಗೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಿಬ್ಬಂದಿ ನಿಯಮವನ್ನು ಉಲ್ಲಂಘಿಸಿ ಗೇಟ್ ತೆಗೆದಿದ್ದಾರೆ, ಹೀಗಾಗಿ ಆತನನ್ನು ಅಮಾನತು ಮಾಡಲಾಗಿದೆ. ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
