ಮೆಸ್ಸಿ ಧರಿಸಿದ್ದ ʻಬಿಶ್ತ್‌ʼಗೆ ಮಿಲಿಯನ್‌ ಡಾಲರ್‌ ನೀಡಲು ಮುಂದಾದ ಒಮಾನ್‌ ಸಂಸದ

Prasthutha|

ಮಸ್ಕತ್: ಫಿಫಾ ವಿಶ್ವಕಪ್‌ ಫೈನಲ್‌ನ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಅರ್ಜೆಂಟಿನಾ ತಂಡದ ನಾಯಕ ಲಯೋನೆಲ್‌ ಮೆಸ್ಸಿ ಧರಿಸಿದ್ದ ಅರಬ್ಬರ ಸಾಂಪ್ರದಾಯಿಕ ಉಡುಪು ʻಬಿಶ್ತ್‌ʼ ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

- Advertisement -

ವಿಶ್ವಕಪ್‌ ಟ್ರೋಪಿ ಎತ್ತಿ ಹಿಡಿಯುವ ಮೊದಲು, ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಅಹ್ಮದ್ ಅಲ್ ಥಾನಿ ಅವರು ಗೌರವ ಸೂಚಕವಾಗಿ ಮೆಸ್ಸಿಗೆ, ಕಪ್ಪು ಬಣ್ಣದ ವಿಶೇಷ ಉಡುಗೆ ಬಿಶ್ತ್‌ ತೊಡಿಸಿದ್ದರು. ಬಳಿಕ ಅದೇ ಉಡುಗೆಯಲ್ಲೇ ಮೆಸ್ಸಿ, ಸಹ ಆಟಗಾರರ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಇದೀಗ ಮೆಸ್ಸಿ ಧರಿಸಿದ್ದ ಬಿಶ್ತ್‌ ಅನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನ ನಡೆಸಿರುವ ಒಮಾನ್‌ ಸಂಸದ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಅಹ್ಮದ್ ಅಲ್ ಬರ್ವಾನಿ, ಇದಕ್ಕಾಗಿ ಒಂದು ಮಿಲಿಯನ್‌ ಡಾಲರ್‌ಗೂ ಅಧಿಕ ಮೊತ್ತ ನೀಡಲು ಮುಂದಾಗಿದ್ದಾರೆ.

- Advertisement -

ಈ ಕುರಿತು ಟ್ವೀಟ್‌ ಮಾಡಿರುವ ಅಹ್ಮದ್‌ ಅಲ್‌ ಬರ್ವಾನಿ, ಕತಾರ್‌ನಲ್ಲಿ 2022ರ ವಿಶ್ವಕಪ್ ಗೆದ್ದ ನಿಮ್ಮನ್ನು ಒಮಾನ್‌ ಸುಲ್ತಾನೇಟ್‌ ಪರವಾಗಿ ನಾನು ಅಭಿನಂದಿಸುತ್ತೇನೆ. ಅರೇಬಿಕ್ ಬಿಶ್ತ್‌, ಶೌರ್ಯ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ. ಆ ಬಿಶ್ತ್‌ ಅನ್ನು ನೀವು ನನಗೆ ಹಿಂತಿರುಗಿಸಿದರೆ, ಪ್ರತಿಯಾಗಿ ನಾನು ನಿಮಗೆ ಮಿಲಿಯನ್ ಡಾಲರ್‌ಗಳನ್ನು ನೀಡುತ್ತೇನೆ ಎಂದು ಬರ್ವಾನಿ ಟ್ವೀಟ್ ಮಾಡಿದ್ದಾರೆ. ಮೊತ್ತದಲ್ಲಿ ಏನಾದರೂ ಹೆಚ್ಚಳ ಮಾಡಲು ಬಯಸಿದರೆ ಅದನ್ನು ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ.

ಅರ್ಜೆಂಟಿನಾ ಮತ್ತು ಫ್ರಾನ್ಸ್‌ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಕತಾರ್‌ನ ಲುಸೈಲ್‌ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದೆ. ಮೆಸ್ಸಿಗೆ ಕತಾರ್‌ನ ಅಮೀರ್‌ ಬಿಶ್ತ್‌ ತೊಡಿಸಿದ ಕ್ಷಣವನ್ನು ಅಭಿಮಾನದಿಂದಲೇ ಆನಂದಿಸಿದ್ದೆ ಎಂದು ದಿ ನ್ಯಾಷನಲ್‌ ಪತ್ರಿಕೆಗೆ ಬರ್ವಾನಿ ತಿಳಿಸಿದ್ದಾರೆ.

ಬಿಷ್ಟ್‌ ಎಂಬುದು ಅರಬ್ ದೇಶಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಪುರುಷರ ಮೇಲಂಗಿಯಾಗಿದೆ. ಅರಬ್ ದೇಶಗಳ ಸಾಂಸ್ಕೃತಿಕ ಪರಂಪರೆಯ ಉಡುಗೆಯಾಗಿರುವ ಇದನ್ನು ಒಂಟೆ ಕೂದಲು ಮತ್ತು ಮೇಕೆ ಉಣ್ಣೆಯಿಂದ ತಯಾರಿಸಲಾಗುತ್ತದೆ. ಅರಬ್ ಜಗತ್ತಿನಲ್ಲಿ ರಾಜಮನೆತನದವರು, ಗಣ್ಯರು ಸೇರಿದಂತೆ  ಹಬ್ಬ,  ಮದುವೆ, ಶೈಕ್ಷಣಿಕ ಘಟಿಕೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ  ಇದನ್ನು ಪುರುಷರು ಧರಿಸುತ್ತಾರೆ.

Join Whatsapp
Exit mobile version