ವಾಷಿಂಗ್ಟನ್: ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಮನಿರ್ದೇಶನ ಮಾಡಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿರುವ ನೆತನ್ಯಾಹು, ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಟ್ರಂಪ್ ಅವರೊಂದಿಗಿನ ಔತಣಕೂಟದ ವೇಳೆ ನೆತನ್ಯಾಹು ಈ ಕುರಿತು ಮಾಹಿತಿ ನೀಡಿದ್ದಾರೆ. ‘ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಾನು ನಿಮ್ಮ ಮುಂದಿಡಲು ಬಯಸುತ್ತೇನೆ. ನಾನು ನಿಮ್ಮನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದ್ದೇನೆ. ನೀವು ಅದಕ್ಕೆ ಅರ್ಹರಾಗಿದ್ದೀರಿ. ಆ ಗೌರವವನ್ನು ನೀವು ಪಡೆಯಬೇಕು’ ಎಂದು ನೆತನ್ಯಾಹು ಹೇಳಿದ್ದಾರೆ.
