Home ಟಾಪ್ ಸುದ್ದಿಗಳು ಜೆಡಿಎಸ್ ಮುಗಿಸಲು ಯಾರಿಂದಲೂ ಆಗಲ್ಲ: ದೇವೇಗೌಡ

ಜೆಡಿಎಸ್ ಮುಗಿಸಲು ಯಾರಿಂದಲೂ ಆಗಲ್ಲ: ದೇವೇಗೌಡ

ಬೆಂಗಳೂರು: ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಹರಿದಾಡುತ್ತಿರುವ ಸುದ್ದಿಯನ್ನು ಜೆಡಿಎಸ್ ನಾಯಕರು ಬಲವಾಗಿ ಅಲ್ಲಗಳೆದಿದ್ದಾರೆ. ನಿನ್ನೆ ಭಾನುವಾರ ನಡೆದ ಜೆಡಿಎಸ್ ಸಭೆಯಲ್ಲಿ ಆಪರೇಷನ್ ಹಸ್ತದ ವಿಚಾರ ಪ್ರಸ್ತಾಪವಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಈ ಸುದ್ದಿಯನ್ನು ತಳ್ಳಿಹಾಕಿದ್ದು, ಯಾರೂ ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಅವರು 11 ಜೆಡಿಎಸ್ ಶಾಸಕರು ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದು ಹೇಳಿ ರಾಜ್ಯ ರಾಜಕೀಯದಲ್ಲಿ ಧೂಳೆಬ್ಬಿಸಿದ್ದಾರೆ. ಅವರ ಈ ಹೇಳಿಕೆಯು ಜೆಡಿಎಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಇರುವ ಜೆಡಿಎಸ್ ಶಾಸಕರ ಸಂಖ್ಯೆ 18 ಮಾತ್ರವೇ. ಇದರಲ್ಲಿ 11 ಶಾಸಕರು ಪಕ್ಷ ತೊರೆಯುತ್ತಾರೆನ್ನುವುದು ದೊಡ್ಡ ಸಂಗತಿ. ನಿನ್ನೆ ಜೆಡಿಎಸ್ ಸಭೆಯಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರು ಜೆಡಿಎಸ್ ಶಾಸಕರು ಮತ್ತು ಮುಖಂಡರಿಗೆ ಧೈರ್ಯ ತುಂಬವ ಪ್ರಯತ್ನ ಮಾಡಿದ್ದಾರೆ.

ಆಮಿಷ ಗಳನ್ನು ಒಡ್ಡಿ ಶಾಸಕರನ್ನು ಸಂಪರ್ಕ ಮಾಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಆ ಪ್ರಯತ್ನ ಈಡೇರುವುದಿಲ್ಲ ಎಂದು ಕೇಂದ್ರ ಸಚಿವರೂ ಆದ ಕುಮಾರಸ್ವಾಮಿ ಹೇಳಿದ್ದಾರೆ. ‘ಜೆಡಿಎಸ್ ಪಕ್ಷದ ಬಗ್ಗೆ ಕಾಂಗ್ರೆಸ್​ನಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಅವರು ಯಾವ ರೀತಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಅಂಥವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ’ ಎಂದು ಜೆಡಿಎಸ್ ಸಭೆಯಲ್ಲಿ ಕುಮಾರಸ್ವಾಮಿ ತಿಳಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕುಮಾರಸ್ವಾಮಿ ಅವರನ್ನು ಮುಗಿಸಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ. ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕುಮಾರಸ್ವಾಮಿ ಅವರನ್ನಾಗಲೀ, ಜೆಡಿಎಸ್ ಪಕ್ಷವನ್ನಾಗಲೀ ಮುಗಿಸಲು ಸಾಧ್ಯವೇ ಇಲ್ಲ. ಕುಮಾರಸ್ವಾಮಿ ಅವರ ಹಿಂದೆ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ ಎಂದು ಮಾಜಿ ಪ್ರಧಾನಿಗಳು ನಿನ್ನೆಯ ಸಭೆಯಲ್ಲಿ ಹೇಳಿದ್ದಾರೆ.

Join Whatsapp
Exit mobile version