‘ನೇಹಾ ಕಾರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ’
ನವದೆಹಲಿ: ರಂಝಾನ್ ಉಪವಾಸದ ಸಂದರ್ಭದಲ್ಲಿ ನೇಹಾ ಭಾರ್ತಿ ಮತ್ತು ಅವರ ತಂಡವು ಪ್ರತಿ ದಿನ ಮುಸ್ಲಿಮರಿಗೆ ದೆಹಲಿಯ ಜಾಮಾ ಮಸೀದಿಯಲ್ಲಿ ಇಫ್ತಾರ್ ಅನ್ನು ಆಯೋಜಿಸುತ್ತಿದ್ದಾರೆ.
ಪ್ರತಿ ದಿನ ಇಫ್ತಾರ್ ಆಹಾರ ವಿತರಿಸುತ್ತಿರುವ ನೇಹಾ ಮತ್ತು ಅವರ ತಂಡಕ್ಕೆ ಹಲವು ಹಿಂದೂಗಳು ಕೂಡಾ ಧನ ಸಹಾಯ ಮಾಡುತ್ತಿದ್ದಾರೆ ಎಂದು ನೇಹಾ ತಿಳಿಸಿದ್ದಾರೆ. ನೇಹಾ, ಅವರ ಅತ್ತಿಗೆ ರಣಿತ ಸಿಂಗ್ ಭಾರ್ತಿ ಮತ್ತು ಅವರ ಸ್ನೇಹಿತ ರಣೇಶ್ ನೂರ್ ತಮ್ಮ ಇತರ ಸ್ನೇಹಿತರೊಂದಿಗೆ ಸೇರಿಕೊಂಡು ಈ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ .
ನೇಹಾ ಮೂರು ವರ್ಷಗಳಿಂದ ರಂಝಾನ್ ನ ಪ್ರತಿ ಸಂಜೆ ನೂರಾರು ಉಪವಾಸ ನಿರತರಿಗೆ ಇಫ್ತಾರ್ ಆಯೋಜಿಸುತ್ತಿದ್ದಾರೆ. ನೇಹಾ ದೆಹಲಿಯ ಚಾವ್ರಿ ಬಜಾರ್ ನಿವಾಸಿಯಾಗಿದ್ದು, ನೇಹಾ ಕಾರ್ಯಕ್ಕೆ ಅವರ ಕುಟುಂಬಸ್ಥರೂ ಕೂಡಾ ಸಾಥ್ ನೀಡಿದ್ದಾರೆ. “ಇಂತಹ ಕಾರ್ಯಗಳು ಹೆಚ್ಚಾಗಿ ನಡೆದು, ಮುಂದೊಂದು ದಿನ ನಾವು ದ್ವೇಷವನ್ನು ತೊಡೆದುಹಾಕಬಲ್ಲೆವು ಎಂಬ ಭರವಸೆ ನನಗಿದೆ” ಎಂಬುದು ನೇಹಾ ಅಭಿಪ್ರಾಯ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನೇಹಾ ಭಾರ್ತಿ, “ಬಾಲ್ಯದಿಂದಲೂ ಜನರಿಗೆ ಆಹಾರ ನೀಡುವುದನ್ನು ನಾನು ಇಷ್ಟಪಡುತ್ತಿದ್ದೆ. ಈಗ ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸ ಮಾಡಿದವರಿಗೆ ಸಂಜೆ ಇಫ್ತಾರ್ ಗೆ ಆಹಾರ ನೀಡುವುದು ನನಗೆ ಸಂತೋಷ ತರುತ್ತಿದೆ. ಇದು ಎರಡು ಸಮುದಾಯಗಳ ನಡುವೆ ಸ್ನೇಹ ಸೇತುವೆ ನಿರ್ಮಿಸುತ್ತದೆ. ಇದರಿಂದಾಗಿ ದೇಶದ ಅಡಿಪಾಯ ಬಲವಾಗುತ್ತದೆ, ಅದು ಮುಖ್ಯ” ಎಂದು ಹೇಳಿದ್ದಾರೆ.
“ನಾನು ಹಳೆಯ ದೆಹಲಿಯ ನಿವಾಸಿ. ನಾನು ಬೆಳೆದ ಸ್ಥಳ ಇದು. ನನಗೆ ಎಂದಿಗೂ ಪೋಷಕರು ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆ ಎಂದು ಹೇಳಿಕೊಟ್ಟಿಲ್ಲ. ಇತ್ತೀಚೆಗೆ ಜನರಲ್ಲಿ ದ್ವೇಷವನ್ನು ಉತ್ತೇಜಿಸಲಾಗುತ್ತಿದೆ. ಇದನ್ನು ನೋಡಿ ನನಗೆ ಬೇಸರವಾಗಿದೆ. ನನ್ನನ್ನು ಪೋಷಕರು ಬೆಳೆಸಿದ ರೀತಿ ಇದಕ್ಕೆ ವಿರುದ್ಧವಾಗಿದೆ. ನಾವು ರೈತರ ಆಂದೋಲನದ ವೇಳೆಯೂ ಸಾಕಷ್ಟು ಕೆಲಸ ಮಾಡಿದ್ದೇವೆ. ಇದೀಗ ಮೂರು ವರ್ಷಗಳಿಂದ ಜಾಮಾ ಮಸೀದಿಯಲ್ಲಿ ರಂಝಾನ್ನ 30 ದಿನಗಳವರೆಗೆ ಇಫ್ತಾರ್ ಅನ್ನು ಆಯೋಜಿಸುತ್ತಿದ್ದೇವೆ” ಎಂದು ನೇಹಾ ಮಾಹಿತಿ ನೀಡಿದ್ದಾರೆ.
“ನಾನು ಇಫ್ತಾರ್ಗೆ ನೀಡುವ ಆಹಾರವನ್ನು ನನ್ನ ಮನೆಯಲ್ಲೇ ತಯಾರಿಸಲಾಗುತ್ತದೆ. ನನ್ನ ಪೋಷಕರು, ಸಹೋದರರು, ಅತ್ತಿಗೆಯರು ಮತ್ತು ಸ್ನೇಹಿತರೊಂದಿಗೆ ಸೇರಿ ನಾನು ಇಫ್ತಾರ್ ಆಹಾರ ತಯಾರಿಸುತ್ತೇನೆ. ನನ್ನ ಪೋಷಕರು ಹೆಚ್ಚಾಗಿ ಆಹಾರ ತಯಾರಿಸುತ್ತಾರೆ. ನಾನು ಅದನ್ನು ಪ್ಯಾಕ್ ಮಾಡಿ ಮಸೀದಿಗೆ ಬಂದು ವಿತರಿಸುತ್ತೇನೆ” ಎಂದು ತಿಳಿಸಿದ್ದಾರೆ.
ನೇಹಾ ಕಾರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.