ಬೆಂಗಳೂರು: ಸಂವಿಧಾನ ಬದಲಾವಣೆ ಮಾಡಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಸಂವಿಧಾನ ರಕ್ಷಣೆ ನಮ್ಮ ಪಕ್ಷದ ಜನ್ಮ ಸಿದ್ಧ ಹಕ್ಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸುಳ್ಳು ಹೇಳುತ್ತಿದೆ. ಸಂವಿಧಾನ ಬದಲಾವಣೆ ಬಗ್ಗೆ ನಾನು ಎಲ್ಲಿ ಹೇಳಿದ್ದೇನೆ?. ಸಾಕಷ್ಟು ಸಲ ಸಂವಿಧಾನ ಬದಲಾವಣೆ ಆಗಿದೆ, ಆದ್ರೆ ಬದಲಾವಣೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇವೆ. ಸಂವಿಧಾನ ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡೋದು, ಸುಳ್ಳು ಹೇಳೋದು ಅವರ ಕೆಲಸವಾಗಿದೆ. ಜೆ.ಪಿ. ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ. ನಾನು 36 ವರ್ಷದಿಂದ ಶಾಸಕ ಆಗಿದ್ದೇನೆ. ನಮ್ಮದು ರಾಷ್ಟ್ರೀಯ ಪಕ್ಷ. ನನಗೆ ಗೊತ್ತಿದೆ ಸಂವಿಧಾನ ಏನು?. ಸಂವಿಧಾನ ಏನು ಹೇಳುತ್ತೆ ಅನ್ನೋ ಪರಿಜ್ಞಾನ ಇದೆ. ನನ್ನ ಹೆಸರನ್ನು ಎಲ್ಲ ಕಡೆ ತೆಗೆದುಕೊಂಡ್ರೆ ತೆಗೆದುಕೊಳ್ಳಲಿ ಎಂದು ತಿಳಿಸಿದರು.
ನಾನು ಜೆ.ಪಿ. ನಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ಬಿಜೆಪಿ ಅವರು ಮಿಸ್ ಗೈಡ್ ಮಾಡ್ತಿದ್ದಾರೆ. ಅವರ ಗ್ರಾಫ್ ಇಳಿಯುತ್ತಿದೆ. ನನಗೆ ಬೇಸಿಕ್ ಕಾಮನ್ ಸೆನ್ಸ್ ಇದೆ. ಸಾಕಷ್ಟು ಸಲ ಸಂವಿಧಾನ ಬದಲಾವಣೆ ಆಗಿದೆ ಅಂತ ಹೇಳಿದ್ದೇನೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ, ನನ್ನ ಹೇಳಿಕೆಯನ್ನು ಮಿಸ್ ಕೋಟ್ ಮಾಡುತ್ತಿದ್ದಾರೆ. ನಾನು ಈ ವಿಷಯಗಳ ಬಗ್ಗೆ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.