ಕೊಚ್ಚಿ: ಕೇರಳದ ಕೊಚ್ಚಿಯ ಕೊಚಿನ್ ಶಿಪ್ ಯಾರ್ಡ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 20,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೊದಲ ದೇಶೀ ವಿಮಾನ ವಾಹಕ ನೌಕೆಯನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಿದರು.
“ಹಿಂದೂ ಮಹಾಸಾಗರ ಮತ್ತು ಶಾಂತ ಸಾಗರ ವಲಯದಲ್ಲಿ ಹಿಂದೆಲ್ಲ ರಕ್ಷಣಾ ವ್ಯವಸ್ಥೆಯನ್ನು ಕಡೆಗಣಿಸಲಾಗಿತ್ತು. ನಾವು ನಮ್ಮ ನೌಕಾ ಪಡೆಯ ಆಯವ್ಯಯ ಹೆಚ್ಚಿಸಿ ದೇಶದ ನೌಕಾ ಸಾಮರ್ಥ್ಯವನ್ನು ವೃದ್ಧಿಸಲು ಬದ್ಧರಾಗಿದ್ದೇವೆ” ಎಂದು ಶುಕ್ರವಾರ ಪ್ರಧಾನಿ ಹೇಳಿದರು.
1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಮಾನವಾಹಕ ಯುದ್ಧ ನೌಕೆ ವಿಕ್ರಾಂತ್ ಮರು ಸೃಷ್ಟಿಯಿದು.
“ಹಿಂದೆಲ್ಲ ಅಭಿವೃದ್ಧಿ ಹೊಂದಿದ ದೇಶಗಳು ಮಾತ್ರ ಇಂತಹ ವಿಮಾನವಾಹಕ ನೌಕೆಗಳನ್ನು ತಯಾರಿಸುತ್ತಿದ್ದರು. ಈಗ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಒಂದು ದಾಪುಗಾಲಿಟ್ಟಿದೆ” ನೌಕೆಯನ್ನು ದೇಶಕ್ಕರ್ಪಿಸುತ್ತ ಮೋದಿ ಹೇಳಿದರು.
ಕಮಾಂಡರ್ ಅಧಿಕಾರಿ ಕ್ಯಾಪ್ಟನ್ ವಿದ್ಯಾಧರ ಹರ್ಕೆ ಸೇವೆಗಿಳಿಸುವ ವಾಕ್ಯವನ್ನು ಓದಿದರು.
ನೌಕಾ ಪಡೆಯ ಡಬ್ಲ್ಯುಡಿಬಿ- ಯುದ್ಧ ನೌಕೆ ವಿನ್ಯಾಸ ಸಂಸ್ಥೆಯು ಇದರ ರೂಪುರೇಷೆ ಹೆಣೆದಿದ್ದು, ಭಾರತದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಸಿಎಸ್ ಎಲ್- ಕೊಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಈ 42,800 ಟನ್ ಸಾಮರ್ಥ್ಯದ ನೌಕೆಯನ್ನು ನಿರ್ಮಿಸಿದೆ.
ಪರೀಕ್ಷಾ ಚಾಲನಾ ಹಂತ ಮುದುವರಿಯಲಿದ್ದು, ಈ ಯುದ್ಧ ನೌಕೆಯ 2023ರ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯ ತತ್ಪರವಾಗುತ್ತದೆ ಎಂದು ಹೇಳಲಾಗಿದೆ.
ಮಿಗ್ 29ಕೆ ಫೈಟರ್ ಜೆಟ್, ಕಮೋವ್- 31 ಬೆಚ್ಚಗಿಸುವ ಹೆಲಿಕಾಪ್ಟರ್, ಎಂಎಚ್- 60ಆರ್ ಬಹುಪಾತ್ರದ ಹೆಲಿಕಾಪ್ಟರ್ ಗಳು, ದೇಶೀಯವಾಗಿ ತಯಾರಿಸಿದ ಎಎಲ್ ಎಚ್- ಆಧುನಿಕ ಹಗುರ ಹೆಲಿಕಾಪ್ಟರ್ ಗಳು, ಎಲ್ ಸಿಎ- ಹಗುರ ದಾಳಿ ಹೆಲಿಕಾಪ್ಟರ್ ಗಳಂಥ 30 ಹಾರುವ ಯಂತ್ರಗಳನ್ನು ಈ ವಿಕ್ರಾಂತ್ ನಿಭಾಯಿಸಬಲ್ಲುದಾಗಿದೆ.
ಡಿಆರ್ ಡಿಎಲ್- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ, ನಾಕಾ ಪಡೆಯ ಸಹಭಾಗಿತ್ವದಲ್ಲಿ ಎಸ್ ಎಐಎಲ್- ಭಾರತೀಯ ಉಕ್ಕು ಪ್ರಾಧಿಕಾರವು ವಿಕ್ರಾಂತ್ ಗಾಗಿ 26,000 ಟನ್ ಉಕ್ಕು ತಯಾರಿಸಿ ಕೊಟ್ಟಿದೆ.
2005ರ ಏಪ್ರಿಲ್ ನಲ್ಲಿ ಈ ನೌಕೆಯ ಕೆಲಸ ಆರಂಭವಾಗಿದ್ದು, ಪ್ರಾರಂಭದಲ್ಲಿ ಉಕ್ಕು ಕತ್ತರಿಸುವ ಕೆಲಸ ಆರಂಭವಾಯಿತು. ಹಡಗಿನ ಕೆಳಭಾಗದ ಅಡಿಹಲಗೆಯನ್ನು 2009ರ ಫೆಬ್ರವರಿಯಲ್ಲಿ ಕೂಡಿಸಲಾಯಿತು. 2013ರ ಆಗಸ್ಟ್ ನಲ್ಲಿ ನೀರಿಗಿಳಿಸಿ ಇತರ ಹಡಗು ಕಟ್ಟುವಿಕೆ ಕೆಲಸ ಪ್ರಾರಂಭಗೊಂಡಿತು.
ನಾಲ್ಕು ಜನರಲ್ ಎಲೆಕ್ಟ್ರಿಕ್ ಎಲ್ ಎಂ2500 ಎಂಜಿನ್ ಗಳನ್ನು ಹೊಂದಿರುವ ಐಎನ್ ಎಸ್ ವಿಕ್ರಾಂತ್ 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ಗರಿಷ್ಠ ವೇಗ 28 ನಾಟ್ಸ್ ಇದ್ದು, ತಡೆ ಬಲವು 7,500 ಎನ್ ಎಂ ಆಗಿದೆ.
ಈ ಹಡಗು 2,200 ಅರೆಗಳನ್ನು ಹೊಂದಿದೆ. 1,600ರಷ್ಟು ಸಿಬ್ಬಂದಿಗಳಿಗೆ ಅವಕಾಶವಿದೆ. ಮಹಿಳಾ ಅಧಿಕಾರಿ ಮತ್ತು ಉನ್ನತ ಹುದ್ದೆಯವರಿಗೆ ವಿಶೇಷ ಕ್ಯಾಬಿನ್ ಗಳೂ ಇವೆ.
ಐಎನ್ ಎಸ್ ವಿಕ್ರಾಂತ್ ಬಹುಪಾಲು ದೇಶೀ ತಯಾರಿಕೆಯ ಭಾಗಗಳನ್ನೇ ಹೊಂದಿದೆ. 2,000 ನೇರ ಉದ್ಯೋಗ ಮತ್ತು 13,000 ಸಂಬಂಧಿತ ಪೂರಕ ಉದ್ಯೋಗಗಳು ಇದರಿಂದ ಸಾಧ್ಯ ಎಂದು ಅಂದಾಜಿಸಲಾಗಿದೆ.