Home ಅಪರಾಧ ಮೈಸೂರು ಜೈಲ್ ಭರೋ ಪ್ರಕರಣ: ಎಲ್ಲಾ 53 ಮಂದಿ ಪ್ರತಿಭಟನಕಾರರು ಖುಲಾಸೆ

ಮೈಸೂರು ಜೈಲ್ ಭರೋ ಪ್ರಕರಣ: ಎಲ್ಲಾ 53 ಮಂದಿ ಪ್ರತಿಭಟನಕಾರರು ಖುಲಾಸೆ

ಮೈಸೂರು: 2009ರಲ್ಲಿ ಮುಸ್ಲಿಮ್ ಯುವಕರ ಅಕ್ರಮ ಬಂಧನ ಖಂಡಿಸಿ ಹಮ್ಮಿಕೊಂಡಿದ್ದ ಜೈಲ್ ಭರೋ ಸಂದರ್ಭದಲ್ಲಿ ಪ್ರತಿಭಟನಕಾರರ ವಿರುದ್ಧ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ 14 ವರ್ಷಗಳ ಬಳಿಕ ಎಲ್ಲಾ 53 ಮಂದಿಯನ್ನು ಮೈಸೂರು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ.

 ಸುದೀರ್ಘ 14 ವರ್ಷಗಳ ಕಾನೂನು ಹೋರಾಟದ ನಂತರ 53 ಜನ ಜನಪರ ಹೋರಾಟಗಾರರು ಖುಲಾಸೆಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ

2009ರ ಜುಲೈ ತಿಂಗಳಲ್ಲಿ ಮೈಸೂರು ಉದಯಗಿರಿ ಮಸೀದಿಯ ಬಳಿ ದುಷ್ಕರ್ಮಿಗಳ ತಂಡವೊಂದು ಹಂದಿಯ ಮಾಂಸವನ್ನು ಎಸೆದಿತ್ತು. ಇದನ್ನು ಖಂಡಿಸಿ ಮುಸ್ಲಿಮ್ ಯುವಕರು ಪ್ರತಿಭಟನೆ ನಡೆಸಿದ್ದರು. ಇದಾದ ಆರು ದಿನಗಳ ಬಳಿಕ ಅದೇ ಪ್ರದೇಶದಲ್ಲಿ ಕೋಮು ಘರ್ಷಣೆ ನಡೆದಿತ್ತು.

ಈ ವೇಳೆ ಪೊಲೀಸರು ಮುಸ್ಲಿಮರ ಮನೆಗಳಿಗೆ ನುಗ್ಗಿ ಅಮಾಯಕ ಯುವಕರನ್ನು ಬಂಧಿಸಿದ್ದರು. ಅಕ್ರಮ ಬಂಧನ ಮುಂದುವರಿದಾಗ ಜನಪರ ಸಂಘಟನೆಗಳು ಬಂಧನ ಖಂಡಿಸಿ ಜೈಲ್ ಭರೋಗೆ ಕರೆ ನೀಡಿತ್ತು. ನೂರಾರು ಜನರು ಮೈಸೂರು ಫೌಂಟೇನ್ ಸರ್ಕಲ್’ನಲ್ಲಿ ಜೈಲ್ ಭರೋಗಾಗಿ ಜಮಾವಣೆಗೊಂಡಿದ್ದರು. ಮುಂಜಾಗೃತಾ ಕ್ರಮವಾಗಿ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸರು ಏಕಾಏಕಿ ಲಾಠಿ ಚಾರ್ಜ್, ಅಶ್ರುವಾಯು ಸಿಡಿಸಿ ಸುಮಾರು  350-400 ಮಂದಿಯನ್ನು ಬಂಧಿಸಿದ್ದರು.

ಬಂಧಿತರನ್ನು ಗುಲ್ಬರ್ಗಾ, ಬಳ್ಳಾರಿ ಹಾಗೂ ಬೆಳಗಾವಿ ಜೈಲುಗಳಿಗೆ ಕಳುಹಿಸಲಾಗಿತ್ತು. ಸುಮಾರು 20 ದಿನಗಳ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಗುಲ್ಬರ್ಗಾ ಜೈಲಿನಲ್ಲಿದ್ದವರನ್ನು ಮೂರು ತಿಂಗಳ ಬಳಿಕ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಮಾತ್ರವಲ್ಲ ಇದು ಅಕ್ರಮ ಬಂಧನ ಎಂದು ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗೆ 50 ಸಾವಿರ ರೂ. ದಂಡ ಕೂಡ ವಿಧಿಸಿತ್ತು.

ಬಂಧಿತ ಮುಖಂಡರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ಅಧಿಕಾರಿಯ ಕೊಲೆಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪೈಕಿ 53 ಮಂದಿಯನ್ನು ಮೈಸೂರು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ.

ಆರೋಪಿಗಳ ಪರವಾಗಿ ವಕೀಲರಾದ ಅನಸ್ ಹಾಗೂ ಅಬೂಬಕ್ಕರ್ ವಾದಿಸಿದ್ದರು.

Join Whatsapp
Exit mobile version