ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ಹಕ್ಕನ್ನು ಕಬಳಿಸುವ ಕರಾಳ ಕಾನೂನು ಎಂದು ಟೀಕಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಸುವುದಾಗಿ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಸದಸ್ಯ ಮೊಹಮ್ಮದ್ ಅದೀಬ್, ಈ ಕಾನೂನಿನ ಮೂಲಕ ಮುಸ್ಲಿಂ ಸಮುದಾಯದ ಆಸ್ತಿಗಳನ್ನು ಕಬಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ನಮ್ಮ ಆಸ್ತಿಯನ್ನು ಕಸಿದುಕೊಳ್ಳಬಹುದೆಂದು ಭಾವಿಸಿ ಅವರು ಇದನ್ನು ತಂದಿದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು. ನಾವು ಸೋತಿದ್ದೇವೆ ಎಂದು ಭಾವಿಸಬೇಡಿ. ಮಸೂದೆಯ ವಿರುದ್ಧದ ಹೋರಾಟವು ಕೇವಲ ಆರಂಭ ಎಂದು ಅವರು ಹೇಳಿದ್ದಾರೆ.
ಆತ್ಮಸಾಕ್ಷಿ ಇರುವ ಎಲ್ಲಾ ನಾಗರಿಕರು ಮಸೂದೆಯನ್ನು ವಿರೋಧಿಸಬೇಕೆಂದು ಮನವಿ ಮಾಡಿದ ಅದೀಬ್, ಪ್ರಸ್ತಾವಿತ ಶಾಸನವನ್ನು ಕಾನೂನುಬದ್ಧವಾಗಿ ಮತ್ತು ಸಾರ್ವಜನಿಕ ಪ್ರತಿಭಟನೆ ಮೂಲಕ ವಿರೋಧಿಸಲಿದ್ದೇವೆ ಎಂದಿದ್ದಾರೆ.